ಬೆಂಗಳೂರು : ಪುತ್ರಿಯರಿಬ್ಬರಿಗೆ ಸರ್ಕಾರಿ ಹುದ್ದೆ ಕೊಡಿಸಲು ಕೆಪಿಎಸ್‌ಸಿ ಅಧ್ಯಕ್ಷರು ಯತ್ನಿಸಿದ ಪ್ರಕರಣ ಈಗ ಕರ್ನಾಟಕ ಲೋಕಸೇವಾ ಆಯೋಗದ ಇತರ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಜಟಾಪಟಿಗೆ ಕಾರಣವಾಗಿದೆ.

ಶಿವಶಂಕರಪ್ಪ ಸಾಹುಕಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ

ಕೆಪಿಎಸ್ಸಿ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂಬ ಆಯೋಗದ ಸದಸ್ಯರ ಸಭೆಯ ನಿರ್ಣಯ ವಿರುದ್ಧ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಜೂ.19ರ ಸಭೆಯಲ್ಲಿ ತಮ್ಮ ಪುತ್ರಿ ಸುಮಾ ಸಾಹುಕಾರ್ ವಿರುದ್ಧದ ವಿಷಯ ಅಜೆಂಡಾದಲ್ಲಿ ಇದ್ದುದರಿಂದ ಆ ಸಭೆಯಲ್ಲಿ ನಾನು ಭಾಗವಹಿಸಲಿಲ್ಲ. ಅದಕ್ಕಾಗಿ ಸಭೆ ನಡೆಸಿ ನಿರ್ಣಯಿಸುವಂತೆ ಮೊದಲ ಸದಸ್ಯರಿಗೆ ಅಧಿಕಾರ ನೀಡಿ ಲಿಖಿತವಾಗಿ ಆಯೋಗದ ಕಾರ್ಯದರ್ಶಿಗಳಿಗೂ ತಿಳಿಸಿದ್ದೆ. ಹೀಗಿರುವಾಗ ಜೂ.19ರ ಸಭೆಯಲ್ಲಿ ತಮ್ಮ ಪುತ್ರಿ ಸುಮಾ ಎಸ್. ಸಾಹುಕಾರ್ ಅವರ ದಾಖಲೆ ಮತ್ತು ಅಭ್ಯರ್ಥಿತ್ವ ರದ್ದತಿ ಕುರಿತು, ಚರ್ಚೆ, ನಿರ್ಣಯ ಆಗಬೇಕಿತ್ತು. ಸಭೆ ಅಷ್ಟಕ್ಕೆ ಸೀಮಿತವಾಗದೆ ಸಭೆಯ ಅಜೆಂಡಾದಲ್ಲಿರದ ವಿಷಯವನ್ನು ಪ್ರಸ್ತಾಪಿಸಿ ನನ್ನ ರಾಜೀನಾಮೆಯ ನಿರ್ಣಯ ಕೈಗೊಂಡಿರುವುದು ನಿಯಮಬಾಹಿರ. ಹೀಗಾಗಿ ಆ ಸಭೆಯ ನಡಾವಳಿಗಳು ಹಾಗೂ ನಿರ್ಣಯವನ್ನು ತಿರಸ್ಕರಿಸಿದ್ದೇನೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಶಿವಶಂಕರಪ್ಪ ಸಾಹುಕಾರ್ ಪ್ರತಿಪಾದಿಸಿದ್ದಾರೆ.

ಇದಲ್ಲದೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಪಟ್ಟಿ ಅಂತಿಮಗೊಳಿಸುವ ಕಾರ್ಯವನ್ನೂ ತಾವೇ ಮಾಡಿಕೊಳ್ಳಲು ಆಯೋಗದ ಮೊದಲ ಸದಸ್ಯರು ಪ್ರಯತ್ನಿಸಿದ್ದಾರೆ. ಜೂ.19ರ ಸಭೆಯ ಬಹುಮತವನ್ನೇ ಬಳಸಿಕೊಂಡು ಕೆಪಿಎಸ್ಸಿ ಅಧ್ಯಕ್ಷರ ಅಧಿಕಾರ ತಮ್ಮದಾಗಿಸಿಕೊಳ್ಳಲು ಯತ್ನಿಸಿದ್ದಾರೆ ಎಂದೂ ಮುಖ್ಯ ಕಾರ್ಯದರ್ಶಿಗಳಲ್ಲಿ ದೂರಿದ್ದಾರೆ.


ಆಪ್ತರಿಂದ ಸ್ವಯಂ ನಿವೃತ್ತಿ!:

ಈ ನಡುವೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಆಪ್ತ ಕಾರ್ಯದರ್ಶಿ ಕೃಷ್ಣ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿಗಳ ಆಪ್ತ ಶಾಖೆಯಲ್ಲಿದ್ದು, ಪ್ರಸ್ತುತ ಗೌಪ್ಯ ಶಾಖೆಯಲ್ಲಿರುವ ಸಹಾಯಕ ಕಾರ್ಯದರ್ಶಿ ನೀತಾ ಕುಮಾರಿ ಅವರು ಸ್ವಯಂ ನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗ ವಿವಾದದಲ್ಲಿರುವ ಕೈಗಾರಿಕಾ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪ್ರಕ್ರಿಯೆಗಳು ಸೇರಿ ಅನೇಕ ನೇಮಕಾತಿಗಳಲ್ಲಿ ಬಹುಮುಖ್ಯ ಪಾತ್ರವನ್ನು ಕೃಷ್ಣ ಹಾಗೂ ನೀತಾ ಕುಮಾರಿ ವಹಿಸಿದ್ದರು. ಕೆಪಿಎಸ್ಸಿ ನೇಮಕಾತಿಗಳು ಹಗರಣದ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲೇ ಈ ಇಬ್ಬರು ಪ್ರಮುಖರು ಸ್ವಯಂ ನಿವೃತ್ತಿ ಬಯಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡ ಮಾಲಿಪಾಟೀಲ್ ಅವರು ಕೆಪಿಎಸ್ಸಿ ಕಾರ್ಯದರ್ಶಿಗಳು ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಕೆಪಿಎಸ್ಸಿ ನೇಮಕಾತಿಗಳು ನಿಷ್ಪಕ್ಷಪಾತವಾಗಿ ನಡೆದಿವೆ ಎಂದು ಸಾಬೀತು ಆಗುವ ತನಕ ಇವರಿಬ್ಬರ ಸ್ವಯಂ ನಿವೃತ್ತಿ ಅರ್ಜಿ ವಿಲೇವಾರಿ ಮಾಡಬಾರದು. ಈ ನೇಮಕಾತಿಗಳ ಕುರಿತು ಸಮಗ್ರ ತನಿಖೆಯಾಗುವ ತನಕ ಇವರಿಬ್ಬರಿಗೂ ಸ್ವಯಂ ನಿವೃತ್ತಿ ನೀಡಬಾರದು ಎಂದೂ ಮರಿಲಿಂಗಗೌಡ ಆಗ್ರಹಿಸಿದ್ದಾರೆ.

ಪುತ್ರಿಗೆ ನೋಟಿಸ್ ಜಾರಿ:

ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಆಯ್ಕೆ ಬಯಸಿ ಸುಳ್ಳು ಆದಾಯ ಪ್ರಮಾಣ ಸಲ್ಲಿಸಿದ್ದ ಸುಮಾ ಎಸ್.ಸಾಹುಕಾರ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ಸುಮಾ ವಿರುದ್ಧ ದುರಾಚಾರ ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಆರಂಭಿಸಿದೆ. ಸುಮಾ ನೀಡುವ ಉತ್ತರ ಅಧರಿಸಿ ಆಯೋಗವು ಪ್ರಕರಣ ದಾಖಲಿಸಲಿದೆ.

ಕನ್ನಡಪ್ರಭ ಬಯಲಿಗೆಳೆದ ಹಗರಣ

ಪುತ್ರಿಯರಿಗೆ ಹುದ್ದೆ ಕೊಡಿಸಲು ಕೆಪಿಎಸ್‌ಸಿ ಅಧ್ಯಕ್ಷರು ಯತ್ನಿಸಿರುವ ಕುರಿತು ‘ಕನ್ನಡಪ್ರಭ’ ಮಾತ್ರ ಮೊದಲು ವರದಿ ಮಾಡಿತ್ತು. ಜು.1ರಂದು ಈ ವರದಿ ಪ್ರಕಟವಾಗಿತ್ತು.