ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಿಕ್ಷಣ ವ್ಯಕ್ತಿಯ ಘನತೆ ಹೆಚ್ಚಿಸುವುದರಿಂದ ವಿದ್ಯಾರ್ಥಿಗಳು ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಲು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಕರೆ ನೀಡಿದರು.ಪಟ್ಟಣದ ಹೊರವಲಯದ ಮಾರೇಹಳ್ಳಿ ಪಿ.ಎಂ.ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಣಕ್ಕೆ ಬೆಲೆ ಸಿಗುವಷ್ಟು ಬೇರೆ ಯಾವುದೇ ಕ್ಷೇತ್ರದಲ್ಲಿ ಸಿಗುವುದಿಲ್ಲ. ಉತ್ತಮ ಶಿಕ್ಷಣ ಪಡೆದರೆ ಒಳ್ಳೇಯ ಉದ್ಯೋಗಾವಕಾಶವೂ ಸಿಗುವುದರ ಜೊತೆಗೆ ಅರ್ಥಿಕತೆಯಲ್ಲಿ ಸದೃಢರಾಗಬಹುದಾಗಿದೆ ಎಂದರು.ಸಾರ್ವಜನಿಕರ ತೆರಿಗೆ ಹಣದಲ್ಲಿ ಉಚಿತವಾಗಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡ ಹುದ್ದೆ ಆಲಂಕರಿಸಬೇಕು. ಕಲಿತ ವಿದ್ಯೆ ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕರ ಹಿತಕ್ಕೆ ಬಳಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಹೆಚ್ಚು ಬೆಲೆ ಸಿಗಲಿದೆ. ಇದರಿಂದ ಸಮಾಜದ ಋಣ ತೀರಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಮುಗಿಸಿರುವ ವಿದ್ಯಾರ್ಥಿಗಳು ದೊಡ್ಡ ಕನಸ್ಸು ಕಟ್ಟಿಕೊಳ್ಳಬೇಕು. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮದಿಂದ ಓದಿದರೇ ಮಾತ್ರ ಯಶಸ್ಸು ಸಿಗಲು ಸಾಧ್ಯ. ಗುರು ಹಿರಿಯರಿಗೆ ಗೌರವ ನೀಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವರಾಜು, ಶಿಕ್ಷಕರಾದ ಮೋಹನ್‌ಕುಮಾರ್, ಕುಮಾರ್, ರಾಮಕೃಷ್ಣೇಗೌಡ, ಸುಪ್ರೀಯಾ, ಸುಮಾ, ಸಿದ್ದೇಗೌಡ, ಕಿರಣ್, ಎಸ್‌ಡಿಎಸ್‌ಸಿ ಸದಸ್ಯರಾದ ಜ್ಯೋತಿ, ಸುಮಾ, ರೇಖಾ ಸೇರಿದಂತೆ ಇತರರು ಇದ್ದರು.
ಶ್ರೀ ವಿದ್ಯಾಗಣಪತಿ ಶಿಕ್ಷಣ ಸಂಸ್ಥೆಗೆ ಶೇ.97.64 ಫಲಿತಾಂಶಮಂಡ್ಯ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕೊತ್ತತ್ತಿ ಗ್ರಾಮದ ಶ್ರೀವಿದ್ಯಾಗಣಪತಿ ಶಿಕ್ಷಣ ಸಂಸ್ಥೆಗೆ ಶೇ.97.64 ರಷ್ಟು ಉತ್ತಮ ಫಲಿತಾಂಶ ಬಂದಿದೆ.
ಉನ್ನತ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 70, ದ್ವಿತೀ ದರ್ಜೆಯಲ್ಲಿ 28, ತೃತೀಯ ದರ್ಜೆಯಲ್ಲಿ 15 ವಿದ್ಯಾರ್ಥಿಗಳು ಸೇರಿ ಒಟ್ಟು 124 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.ಶಾಲೆಯ ವಿದ್ಯಾರ್ಥಿನಿ ಸಿ.ಎಸ್.ಗಗನ 586 (ಶೇ.93.76) ಅಂಕ, ಅಂಜನಾ 584 (ಶೇ.93.44) ಹಾಗೂ ಟಿ.ಎನ್.ಮೋನಿಕಾ 563 (ಶೇ.90.08) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಹಾಗೂ ಹಿಂದಿ ವಿಷಯದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು 125 ಹಾಗೂ 100 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಕೆ.ಜರವೇಗೌಡ, ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಶ್ರೀಆಂಜನೇಯಸ್ವಾಮಿ ಪ್ರೌಢಶಾಲೆಗೆ ಶೇ.100 ರಷ್ಟು ಫಲಿತಾಂಶಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಯಲಿಯೂರು ಗ್ರಾಮದ ಶ್ರೀಆಂಜನೇಯಸ್ವಾಮಿ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ.ಪರೀಕ್ಷೆ ಬರೆದ ಎಲ್ಲಾ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಏಳು ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 28 ಮಕ್ಕಳು ಪ್ರಥಮ ದರ್ಜೆಯಲ್ಲಿ, 7 ಮಂದಿ ದ್ವಿತೀಯ ಹಾಗೂ 4 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಪೈಕಿ ತನುಷ್‌ಗೌಡ ಬಿ (ಶೇ.97.28), ದೀಕ್ಷಾ ಕೆ.ಪಿ. (ಶೇ.95.52), ಲಕ್ಷ್ಮಿ ಆರ್ (ಶೇ.95.52), ಭೂಮಿಕಾ (ಶೇ.91.68), ಅಹಲ್ಯಾ ಎಸ್.ವಿ (ಶೇ.90.50 ವರ್ಷಿಣಿ (ಶೇ.90.50), ದೀಕ್ಷಿತ್‌ಕುಮಾರ್ (ಶೇ.85.60) ರಷ್ಟು ಅಂಕ ಪಡೆದಿದ್ದಾರೆ ಎಂದು ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ.