ಕನ್ನಡಪ್ರಭ ವಾರ್ತೆ ಮಂಡ್ಯ

ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯ್ತಿ ನಿರ್ವಹಿಸುವಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದರಿಂದ ನಿರ್ವಹಣೆಯ ಹೊಣೆ ಹೊತ್ತ ಗ್ರಾಮ ಪಂಚಾಯ್ತಿಗಳ ಮೇಲೆ ವಿದ್ಯುತ್ ದಂಡದ ಹೊರೆ ಬೀಳುತ್ತಿದೆ ಎಂದು ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಹಳ್ಳಿ ಸತೀಶ್ ಆರೋಪಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ಅಧಿನಿಯಮ ೧೯೯೩ರ ಅನ್ವಯ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಪೂರ್ಣ ಜವಾಬ್ದಾರಿ ಜಿಲ್ಲಾ ಪಂಚಾಯ್ತಿಗೆ ಸೇರಿದೆ. ಗ್ರಾಮ ಪಂಚಾಯ್ತಿಗಳ ಜವಾಬ್ದಾರಿ ಅವುಗಳ ನಿರ್ವಹಣೆ ಮಾತ್ರ. ಆದರೆ, ಜಿಪಂ ಕುಡಿವ ನೀರಿನ ಕೊಳವೆ ಬಾವಿಗಳನ್ನು ಕೊರೆಸಿ ವಿದ್ಯುತ್ ಸಂಪರ್ಕ ಕಲ್ಪಿಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಗ್ರಾಮದ ಜನರಿಗೆ ಕುಡಿಯುವ ನೀರು ಕೊಡುವ ಅನಿವಾರ್ಯತೆಯಿಂದ ಗ್ರಾಪಂಗಳು ವಿದ್ಯುತ್ ಸಂಪರ್ಕ ತಾನೇ ಮಾಡಿಕೊಂಡು ಕುಡಿವ ನೀರನ್ನು ಜನರಿಗೆ ಒದಗಿಸುತ್ತಿವೆ. ಆ ಗ್ರಾಪಂಗಳಿಗೆ ವಿದ್ಯುತ್ ಸರಬರಾಜು ಕಂಪನಿ ಜಾಗೃತದಳದವು ದಂಡ ವಿಧಿಸುತ್ತಿದ್ದಾರೆ. ಜಿಪಂ ಅಧಿಕಾರಿಗಳು ಅದನ್ನು ಬೆಂಬಲಿಸುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಗ್ರಾಪಂಗಳಿಂದ ದಂಡ ವಸೂಲಿ ಮಾಡಿರುವುದು ವಿಪರ್ಯಾಸ ಎಂದು ಆರೋಪಿಸಿದರು.

ಕೂಡಲೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ದಂಡದ ಹಣವನ್ನು ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ವಾಪಸ್ ಕೊಡಿಸಬೇಕು ಎಂದು ಆಗ್ರಹಪಡಿಸಿದರು.


ಗ್ರಾಪಂಗಳಲ್ಲಿನ ಹೆಚ್ಚಿನ ಬೀದಿ ದೀಪಗಳಿಗೆ ಮೀಟರ್‌ಗಳನ್ನು ಅಳವಡಿಸಲಾಗಿಲ್ಲ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ೧೦ ಜನವರಿ ೨೦೨೬ರಂದು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮೀಟರ್ ಅಳವಡಿಸದೆ ಬಿಲ್ ನೀಡಬಾರದೆಂಬ ಆದೇಶ ಹೊರಡಿಸಿದ್ದರೂ ಎಸ್ಕಾಂಗಳು ಮೀಟರ್ ಇಲ್ಲದಿರುವಲ್ಲಿಯೂ ಸರಾಸರಿ ಬಿಲ್ ನೀಡುತ್ತಿರುವುದಾಗಿ ದೂಷಿಸಿದರು.

ಎಸ್ಕಾಂಗಳು ಬೋರ್‌ವೆಲ್‌ಗಳು ನಿಷ್ಕ್ರಿಯವಾಗಿರುವ ಪಂಪ್‌ಸೆಟ್‌ಗಳಿಗೂ ಏಕಪಕ್ಷೀಯವಾಗಿ ವಿದ್ಯುತ್ ಶುಲ್ಕ, ಬಡ್ಡಿ, ಚಕ್ರಬಡ್ಡಿಯನ್ನು ವಿಧಿಸುತ್ತಿವೆ. ಇದರಿಂದ ಗ್ರಾಪಂಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿದೆ. ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರ ಪ್ರತಿ ವರ್ಷ ೧೦ ಲಕ್ಷಕ್ಕೂ ಹೆಚ್ಚು ಅನುದಾನ ನೀಡುತ್ತಿದೆ. ಆದರೆ, ಇದರಲ್ಲಿ ಶೇ. ೬೦ರಷ್ಟು ಹಣವನ್ನು ವಿದ್ಯುತ್ ಬಿಲ್‌ಗೆ ಕಟಾವು ಮಾಡಿಕೊಂಡು ಉಳಿದ ೪೦ರಷ್ಟು ಹಣ ಮಾತ್ರ ನೀಡುತ್ತಿದೆ. ಇದರಲ್ಲಿ ನೌಕರರ ಭತ್ಯೆ ಸೇರಿದಂತೆ ಇತರೆ ವೆಚ್ಚಗಳನ್ನು ಭರಿಸುವುದು ಪಂಚಾಯ್ತಿಗಳಿಗೆ ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

೨೦೧೫ರ ಮಾರ್ಚ್ ೩೧ರಂದು ಗ್ರಾಪಂಗಳಲ್ಲಿ ಬಾಕಿ ಉಳಿದಿದ್ದ ೩,೭೬೬.೮೧ ಕೋಟಿ ಹಣವನ್ನು ೨೦೧೭ರಲ್ಲಿ ಖಾತರೀಕರಣದ ಮೂಲಕ ತೀರುವಳಿ ಮಾಡಲು ಆದೇಶಿಸಲಾಗಿತ್ತು. ಪುನಃ ೨೦೨೧ರ ಏಪ್ರಿಲ್ ೧ರಿಂದ ೨೦೨೩ರ ಮಾ.೩೧ರವರೆಗೆ ಗ್ರಾಪಂಗಳಲ್ಲಿ ಬಾಕಿ ಉಳಿದಿದ್ದರೂ ೫,೨೫೭.೭೦ ಕೋಟಿ ಮೊತ್ತದ ಹಣವನ್ನು ೨೦೨೪ರಲ್ಲಿ ಖಾತರೀಕರಣದ ಮೂಲಕ ತೀರುವಳಿ ಮಾಡಿಕೊಳ್ಳಲಾಗಿದೆ. ಜೊತೆಗೆ ೧,೨೫೨.೨೦ ಕೋಟಿ ರು.ಗಳನ್ನು ಎಸ್ಕಾಂಗಳು ಮನ್ನಾ ಮಾಡಲು ಆದೇಶಿಸಲಾಗಿದೆ. ಆದರೂ, ಈ ಆದೇಶ ಆದೇಶವಾಗಿಯೇ ಉಳಿದಿದೆ ಎಂದು ಟೀಕಿಸಿದರು.

ವಿದ್ಯುತ್ ಬಿಲ್‌ಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಗ್ರಾಪಂಗಳಿಗೆ ಇಂಧನ ಬಳಕೆ, ಬಿಲ್ಲಿಂಗ್ ಮತ್ತು ಸಮನ್ವಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾರ್ಗದರ್ಶನ ನೀಡಲು ಪ್ರತಿ ಜಿಲ್ಲಾ ಪಂಚಾಯ್ತಿಯಲ್ಲಿ ಒಂದು ವಿದ್ಯುತ್ ಎಂಜಿನಿಯರ್ ಹುದ್ದೆಯನ್ನು ಸೃಜಿಸಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಬಿಲ್ ಕಡಿಮೆ ಮಾಡಲು ಕಲಬುರುಗಿ ಮಹಾನಗರ ಪಾಲಿಕೆ ಸೋಡಿಯಂ ವೇಪರ್ ಲೈಟ್‌ಗಳನ್ನು ಎಲ್‌ಇಡಿ ಬಲ್ಬ್‌ಗಳಿಂದ ಬದಲಾಯಿಸುವ ಮೂಲಕ ವಾರ್ಷಿಕ ೨೪ ಕೋಟಿಗಳನ್ನು ಉಳಿಸುತ್ತದೆ. ಈ ಮಾದರಿಯನ್ನು ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಎಂ. ಚಾಮರಾಜು, ಕಿಶೋರ್, ಬಿ.ಕೆ. ಕೆಂಪೇಗೌಡ, ಸುರ್ಣವತಿ ಎಸ್. ಇತರರು ಗೋಷ್ಠಿಯಲ್ಲಿದ್ದರು.