ಎಂ.ಅಫ್ರೋಜ್ ಖಾನ್
ರಾಮನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಉದ್ದೇಶಿತ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರ ಜೊತೆಗೂಡಿ ಬೃಹತ್ ಪಾದಯಾತ್ರೆ ನಡೆಸಲು ಜೆಡಿಎಸ್ ಸಜ್ಜಾಗಿದೆ. ಭಾನುವಾರದಿಂದ ಮೂರು ದಿನಗಳ ಕಾಲ (ಆಗಸ್ಟ್ 9, 10, 11) ಬಿಡದಿಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಬೃಹತ್ ಪಾದಯಾತ್ರೆಗೆ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ. ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ.
ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಟೌನ್‌ಶಿಪ್ ಯೋಜನೆ ವಿರುದ್ಧ ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲು ತೀರ್ಮಾನಿಸಿರುವ ಜೆಡಿಎಸ್, ಶನಿವಾರ ಸಮನ್ವಯ ಸಭೆ ನಡೆಸಲಿದ್ದು, ಸಭೆಯಲ್ಲಿ ಪಾದಯಾತ್ರೆಗೆ ರೂಪುರೇಷೆಗಳನ್ನು ಅಂತಿಮಗೊಳಿಸಲಿದೆ.
ಭಾನುವಾರ ಬೆಳಗ್ಗೆ ಬೈರಮಂಗಲ ವೃತ್ತದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಎರಡನೇ ದಿನ, ಸೋಮವಾರ ಬಿಡದಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೈರಮಂಗಲ ವೃತ್ತದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಪ್ರತಿನಿತ್ಯ 10-12 ಕಿ.ಮೀ.ಯಂತೆ 3 ದಿನಗಳ ಕಾಲ 38 ಕಿ.ಮೀ. ದೂರ ಪಾದಯಾತ್ರೆ ನಡೆಯಲಿದೆ. ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 2 -3 ಸಾವಿರ ರೈತರು ಹಾಗೂ ಜೆಡಿಎಸ್‌ನ 3-5 ಸಾವಿರ ಕಾರ್ಯಕರ್ತರು ಸೇರಿ ಅಂದಾಜು 5 ರಿಂದ 6 ಸಾವಿರ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಗಳಿವೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೆ, ಜೆಡಿಎಸ್ ನಾಯಕರು ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿಗೂ ಮೊದಲೇ ಪಾದಯಾತ್ರೆಯ ದಿನಾಂಕವನ್ನು (ಜುಲೈ 30, 31, ಆಗಸ್ಟ್1) ಘೋಷಣೆ ಮಾಡಿದರು. ಬಳಿಕ, ದೇವೇಗೌಡರವರ ಪತ್ನಿ ಚನ್ನಮ್ಮನವರ ನಿಧನದಿಂದಾಗಿ ಪಾದಯಾತ್ರೆ ಮುಂದಕ್ಕೆ ಹೋಗಿತ್ತು.
ಪಾದಯಾತ್ರೆ ವೇಳಾಪಟ್ಟಿ:
ಆಗಸ್ಟ್ 9: ಬೆಳಗ್ಗೆ ಬೈರಮಂಗಲ ವೃತ್ತದಿಂದ ಪಾದಯಾತ್ರೆ ಪ್ರಾರಂಭ. ಮಧ್ಯಾಹ್ನ ಜೋಗರದೊಡ್ಡಿಯಲ್ಲಿ ಮಧ್ಯಾಹ್ನದ ಊಟ. ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ.
ಆಗಸ್ಟ್ 10: ಬೆಳಗ್ಗೆ ಬಿಡದಿಯಿಂದ ಹೊರಟು ಮಧ್ಯಾಹ್ನ ಎಂ. ಸಿರಿ ಕನ್ವೆನ್ಶನ್ ಹಾಲ್‌ನಲ್ಲಿ ಊಟ. ಮೈಸೂರು ರಸ್ತೆಯ ನೈಸ್ ಜಂಕ್ಷನ್ ತಲುಪಿ ಜೆ.ಕೆ. ಗ್ರ್ಯಾಂಡ್ ನಲ್ಲಿ ವಾಸ್ತವ್ಯ.
ಆಗಸ್ಟ್ 11: ಬೆಳಗ್ಗೆ ಮೈಸೂರು ರಸ್ತೆಯ ನೈಸ್ ಜಂಕ್ಷನ್‌ನಿಂದ ಹೊರಟು ಮಧ್ಯಾಹ್ನ ಫ್ರೀಡಂ ಪಾರ್ಕ್ ತಲುಪುವುದು.
ರಾಜಕೀಯ ಅಜೆಂಡಾ ಇರುವ ಪಾದಯಾತ್ರೆ
ರಾಜಕೀಯ ಅಜೆಂಡಾ ಇಟ್ಟುಕೊಂಡು ಜೆಡಿಎಸ್ ಪಾದಯಥ್ರೆ ಮಾಡುತ್ತಿದ್ದಾರೆ. ಇದನ್ನು ತಪ್ಪು ಎಂದು ಹೇಳುವುದಿಲ್ಲ. ರೈತರ ಅಭಿಪ್ರಾಯ ಕೇಳಲು ಸಮಿತಿ ರಚಿಸಲಾಗಿದೆ. ಒಂದು ತಿಂಗಳಲ್ಲಿ ವರದಿ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
- ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
