ಅಧಿವೇಶನದ ಕಲಾಪ ಶುರುವಿಗೂ ಮುನ್ನ ‘ವಂದೇ ಮಾತರಂ’ಗೀತೆಯ ಮೊದಲೆರಡು ಚರಣ ಮಾತ್ರ ಗಾಯನಕ್ಕೆ ಸೀಮಿತಗೊಳಿಸಿದ ವಿಚಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪ್ರತಿಭಟನೆ, ವಾಗ್ವಾದ, ಮಾತಿನ ಚಕಮಕಿಗೆ ಸಾಕ್ಷಿಯಾಯಿತು.

, ಬೆಂಗಳೂರು : ಡಾ.ಕಸ್ತೂರಿ ರಂಗನ್‌ ವರದಿ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಸೋಮವಾರದಿಂದ ಆರಂಭವಾದ ಅಧಿವೇಶನದ ಕಲಾಪ ಶುರುವಿಗೂ ಮುನ್ನ ‘ವಂದೇ ಮಾತರಂ’ಗೀತೆಯ ಮೊದಲೆರಡು ಚರಣ ಮಾತ್ರ ಗಾಯನಕ್ಕೆ ಸೀಮಿತಗೊಳಿಸಿದ ವಿಚಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪ್ರತಿಭಟನೆ, ವಾಗ್ವಾದ, ಮಾತಿನ ಚಕಮಕಿಗೆ ಸಾಕ್ಷಿಯಾಯಿತು.

ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಬೇಕೆಂಬ ಸರ್ಕಾರದ ಆದೇಶವನ್ನು ಪಾಲಿಸುವುದಾಗಿ ಆಡಳಿತ ಪಕ್ಷದ ಸದಸ್ಯರು ಬಲವಾಗಿ ಸಮರ್ಥಿಸಿಕೊಂಡರೆ, ಬಿಜೆಪಿ ಸದಸ್ಯರು ಈವರೆಗೆ ಎಲ್ಲ ಆರು ಚರಣ ಹಾಡಲಾಗುತ್ತಿತ್ತು. ಈಗ ಎರಡೇ ಚರಣಕ್ಕೆ ಸೀಮಿತ ಮಾಡಿದ್ದ ಸರಿಯಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು.

ಕೆಳಮನೆಯಲ್ಲಿ ಗೊಂದಲ:

ಕೆಳಮನೆಯಲ್ಲಿ ಸಭಾಧ್ಯಕ್ಷರು ಹಾಗೂ ಮೇಲ್ಮನೆಯಲ್ಲಿ ಸಭಾಪತಿಗಳು ಎರಡು ಚರಣಗಳಿಗೆ ವಂದೇ ಮಾತರಂ ಗೀತೆ ಸೀಮಿತಗೊಳಿಸಿ, ಬಳಿಕ ಸಂವಿಧಾನದ ಪೀಠಿಕೆ ಓದಿಸಿದರು. ಆದರೆ ಪ್ರತಿಪಕ್ಷ ಸದಸ್ಯರು ಈ ವೇಳೆ ಪೂರ್ಣ ಆರು ಚರಣಗಳನ್ನು ಹಾಡುವುದನ್ನು ಮುಂದುವರಿಸಿದರು. ಆಡಳಿತ ಪಕ್ಷದ ಸದಸ್ಯರು ಸಂತಾಪ ಚರ್ಚೆ ನಡೆಸುವಾಗ ಬಿಜೆಪಿ ಸದಸ್ಯರು, ಸಂವಿಧಾನ ಪೀಠಿಕೆ ಓದಲು ಶುರು ಮಾಡಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೆಳಮನೆಯಲ್ಲಿ ವಂದೇ ಮಾತರಂ ಗೀತೆಯ ಮೊದಲೆರಡು ಚರಣ ಹಾಡುವಾಗ ಗೌರವಾರ್ಥ ಎದ್ದು ನಿಂತಿದ್ದ ಅಧಿಕಾರಿಗಳು, ಗ್ಯಾಲರಿಯಲ್ಲಿದ್ದ ಸಾರ್ವಜನಿಕರಿಗೆ ಬಿಜೆಪಿ ಸದಸ್ಯರು ಆರು ಚರಣ ಹಾಡುವಾಗ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೆ ಸಿಲುಕಿದ ಪ್ರಸಂಗವೂ ನಡೆಯಿತು.

ಪ್ರತಿಭಟನೆ, ಸದನ ಮುಂದೂಡಿಕೆ:

ಇನ್ನು ಮೇಲ್ಮನೆಯಾದ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಸಚೇತಕ ಎನ್‌.ರವಿಕುಮಾರ್‌ ಸೇರಿ ಬಿಜೆಪಿ ಸದಸ್ಯರು, ವಂದೇ ಮಾತರಂ ಪೂರ್ಣ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಈ ಮೊದಲು ಎರಡೇ ಚರಣ ಹಾಡಲಾಗುತ್ತಿತ್ತು. ಬಿಜೆಪಿ ಸಭಾಪತಿಗಳು ಬಂದ ನಂತರ ಆರು ಚರಣ ಹಾಡಲು ಆರಂಭಿಸಲಾಯಿತು ಎಂದು ಹೇಳಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಈ ನಡುವೆ ವಂದೇ ಮಾತರಂ ಕುರಿತು ಸರ್ಕಾರದ ಆದೇಶ ಹೊರಡಿಸಿದೆ. ಈ ವಿಷಯದಲ್ಲಿ ಸಭಾಪತಿಗಳಿಗೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಭಾನಾಯಕ ಡಾ. ಯತೀಂದ್ರ ಅವರು ಹೇಳಿದ ಮಾತು ಕೆಲ ಕಾಲ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸಭಾನಾಯಕರು ಪೀಠಕ್ಕೆ ಅಗೌರವ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಗೆ ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಹಾಡಬೇಕೆಂದು ಬಿಜೆಪಿ ಸದಸ್ಯರು ಸಭಾಪತಿಗಳ ಮುಂದೆ ಪ್ರತಿಭಟನೆ ನಡೆಸಿದಾಗ, ಸಭಾಪತಿಗಳು ಕಲಾಪವನ್ನು ಕೆಲ ಕಾಲ ಮುಂದೂಡಿದರು. ಪುನಃ ಕಲಾಪ ಆರಂಭವಾದಾಗ, ವಂದೇ ಮಾತರಂ ಕುರಿತು ಬಿಜೆಪಿ ಸದಸ್ಯರ ಭಾವನೆಗಳ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿ ಮುಂದಿನ ವಿಷಯ ಕೈಗೆತ್ತಿಕೊಂಡರು.