ಬರಗಾಲ ಘೋಷಣೆ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಬೆರಳು ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಮಾತ್ರವಲ್ಲ, ರಾಜ್ಯದಲ್ಲಿ ಆಡಳಿತವೇ ಸತ್ತು ಹೋಗಿದೆ, ಎಲ್ಲದಕ್ಕೂ ಕೇಂದ್ರದ ಕಡೆಗೆ ನೋಡುವುದಾದರೆ ನಿಮ್ಮ ಕೆಲಸ ಏನು ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಕಿಡಿ ಕಾರಿದರು.
ಹಾನಗಲ್ಲ: ಬರಗಾಲ ಘೋಷಣೆ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಬೆರಳು ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಮಾತ್ರವಲ್ಲ, ರಾಜ್ಯದಲ್ಲಿ ಆಡಳಿತವೇ ಸತ್ತು ಹೋಗಿದೆ, ಎಲ್ಲದಕ್ಕೂ ಕೇಂದ್ರದ ಕಡೆಗೆ ನೋಡುವುದಾದರೆ ನಿಮ್ಮ ಕೆಲಸ ಏನು ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಕಿಡಿ ಕಾರಿದರು.
ಸೋಮವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ತಾಪಂ, ಜಿಪಂ, ಗ್ರಾಪಂ ಚುನಾವಣೆಗಳನ್ನು ನಡೆಸಬೇಕು ಎಂಬ ಬಗ್ಗೆ ನ್ಯಾಯಾಲಯದ ನಿರ್ದೇಶನವಾಗಿದೆ. ಆದರೂ ಮೀಸಲಾತಿ ಗೊಂದಲಗಳನ್ನು ಸೃಷ್ಟಿ ಮಾಡಿ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂದೂಡುತ್ತಲೇ ಹೋಗುವ ಹುನ್ನಾರದಲ್ಲಿದೆ. ಕಾಂಗ್ರೆಸ್ಸಿಗೆ ಈ ಚುನಾವಣೆ ಎದುರಿಸುವ ಶಕ್ತಿಯೂ ಇಲ್ಲ. ವಿಶ್ವಾಸವೂ ಇಲ್ಲ. ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಿಸಿದರೂ ಬಿಜೆಪಿ ಸಿದ್ಧವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಗೆ ಹಾನಗಲ್ಲ ತಾಲೂಕು ತವರೂರು. ದಿ.ಸಿ.ಎಂ.ಉದಾಸಿ ಅವರ ಮೂಲಕ ಇಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದೆ. ಬಿಜೆಪಿಗೆ ಮತದಾರರು ಕಾರ್ಯಕರ್ತರ ಕೊರತೆ ಇಲ್ಲ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ೯ ಸಾವಿರ ಅಧಿಕ ಮತ ಬಿಜೆಪಿಗೆ ಬಂದಿದೆ. ಅದಕ್ಕಾಗಿಯೇ ಈಗ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಇದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಅವರಲ್ಲಿ ಮನಸ್ಸಿಲ್ಲ. ಬಿಜೆಪಿಗೆ ಈ ಬಾರಿ ಎಲ್ಲ ಗ್ರಾಪಂ, ಜಿಪಂ, ತಾಪಂ ಚುನಾವಣೆ ಗೆಲ್ಲುವ ವಿಶ್ವಸವಿದೆ. ಹಾನಗಲ್ಲ ತಾಲೂಕಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿಯೇ ಎಲ್ಲ ಚುನಾವಣೆ ಎದುರಿಸುತ್ತೇವೆ. ಇದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಿಕ್ಕಿದೆ. ಹಾನಗಲ್ಲ ತಾಲೂಕಿನಲ್ಲಿ ಬಿಜೆಪಿ ಬಲಾಢ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ, ಮಾಜಿ ಶಾಸಕ ಶಿವರಾಜ ಸಜ್ಜನ, ಶಿವಾನಂದ ಮ್ಯಾಗೇರ, ರಾಜಶೇಖರ ಕಟ್ಟೇಗೌಡರ, ನಾಗರಾಜ ಉದಾಸಿ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ, ಮಾಲತೇಶ ಸೊಪ್ಪಿನ, ಭೋಜರಾಜ ಕರೂದಿ, ರಾಘವೇಂದ್ರ ತಹಸೀಲ್ದಾರ್, ಕೃಷ್ಣ ಈಳಿಗೇರ, ನಿಂಗಪ್ಪ ಗೊಬ್ಬೇರ, ಚಂದ್ರಣ್ಣ ಹರಿಜನ, ಗಣೇಶಪ್ಪ ಕೋಡಿಹಳ್ಳಿ, ರಾಜು ಗೌಳಿ, ಶಿವಲಿಂಗಪ್ಪ ತಲ್ಲೂರ, ರಾಜಣ್ಣ ಗೌಳಿ, ಸುನೀಲ ಹಿರೇಮಠ ಮೊದಲಾದವರು ಇದ್ದರು.