ಬೆಂಗಳೂರು : ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ತುಸು ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಹಿರಿಯೂರು ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು ಹಿರಿಯೂರು ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟು ಕೊಡಬೇಕು ಎಂಬ ಹೇಳಿಕೆ ನೀಡಿದರು.
ಜೆಡಿಎಸ್ ನಾಯಕರೊಂದಿಗೆ ಶೀಘ್ರ ಚರ್ಚೆ
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್, ಜೆಡಿಎಸ್ ನಾಯಕರೊಂದಿಗೆ ಶೀಘ್ರ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಮಾತನಾಡಿ, ಹಿರಿಯೂರು ಉಪಚುನಾವಣೆಗೆ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಇಚ್ಛೆ ಪಕ್ಷದಲ್ಲಿದೆ. ಈ ಬಗ್ಗೆ ಈಗಾಗಲೇ ಬಿಜೆಪಿಯ ವರಿಷ್ಠರೊಂದಿಗೆ ಚರ್ಚಿಸಿ ಮನವಿ ಮಾಡಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನೂ ನಡೆಸಿದ್ದೇನೆ. ಸಮಯ ಇದೆ. ನೋಡೋಣ ಎಂದರು.
ನಾನು ಹಿರಿಯೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಹಿರಿಯೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅದೆಲ್ಲ ವದಂತಿ. ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದೇ ಕೆಲಸವೇ? ಸದ್ಯಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಅಲ್ಲಿನ ಕೆಲಸಗಳ ಬಗ್ಗೆ ಗಮನ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸುರೇಶ್‌ಬಾಬು ಮಾತನಾಡಿ, ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆಯೇ ನೇರಾ ಹಣಾಹಣಿ ಇದೆ. ಆ ಕ್ಷೇತ್ರದ ಮೈತ್ರಿ ಟಿಕೆಟ್ ಅನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕು. ಅಲ್ಲಿನ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು. ಟಿಕೆಟ್ ಹಂಚಿಕೆ ಸಂಬಂಧ ಈಗಾಗಲೇ ಹತ್ತು ಜನ ಮುಖಂಡರ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
