ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 10 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು, ಬೆಂಗಳೂರು ದಕ್ಷಿಣ, ಚಿತ್ರದುರ್ಗ, ಬೀದರ್, ತುಮಕೂರು, ಶಿವಮೊಗ್ಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ 10 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 53 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿ ಒಟ್ಟು 49.83 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 10 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?:
1.ಬಸನಗೌಡ ಪಾಟೀಲ್ (ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ನ ಕಾರ್ಯಪಾಲಕ ಅಭಿಯಂತರ, ರಾಯಚೂರು ಜಿಲ್ಲೆ): 7 ಕಡೆ ದಾಳಿ, 5 ಸೈಟ್, 4 ಮನೆ, 92 ಎಕರೆ ಕೃಷಿ ಜಮೀನು, ₹28.79 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹6.11 ಕೋಟಿ ಮೌಲ್ಯದ ಆಸ್ತಿ.
2. ಎಂ.ಶಂಕರ್ (ಕೃಷಿ ಎಂಜಿನಿಯರಿಂಗ್ ವಿವಿ ಸಹ ಪ್ರಾಧ್ಯಾಪಕ, ಚಿತ್ರದುರ್ಗ ಜಿಲ್ಲೆ): 6 ಕಡೆ ದಾಳಿ, 1 ಸೈಟ್, 2 ಮನೆ, 8.26 ಎಕರೆ ಕೃಷಿ ಜಮೀನು, ₹26.10 ಲಕ್ಷದ ಚಿನ್ನಾಭರಣಗಳು, ₹1.02 ಕೋಟಿ ಬೆಲೆ ಬಾಳುವ ಇತರೆ ವಸ್ತುಗಳು ಸೇರಿ ಒಟ್ಟು ₹1.87 ಕೋಟಿ ಮೌಲ್ಯದ ಆಸ್ತಿ.
3.ಬಿ.ಎಚ್ ದುಗ್ಗಪ್ಪ (ಜಲಾನಯನ ಅಭಿವೃದ್ಧಿ ಇಲಾಖೆ ವಲಯ ಅರಣ್ಯಾಧಿಕಾರಿ, ಚಿತ್ರದುರ್ಗ ಜಿಲ್ಲೆ): 3 ಕಡೆ ದಾಳಿ, 3 ಸೈಟ್, 1 ಮನೆ, ₹10.75 ಲಕ್ಷ ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು ₹1.95 ಕೋಟಿ ಮೌಲ್ಯದ ಆಸ್ತಿ.
4. ನರೇಂದ್ರ ಕುಮಾರ್, (ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ, ಬೆಂಗಳೂರು ಜಿಲ್ಲೆ): 4 ಕಡೆ ದಾಳಿ, 3 ಮನೆ, 4 ಎಕರೆ ಕೃಷಿ ಜಮೀನು, ₹1.20 ಕೋಟಿ ಮೌಲ್ಯದ ಚಿನ್ನ, ₹89.16 ಲಕ್ಷ ಬ್ಯಾಂಕ್ ಠೇವಣಿ, ಸೇರಿ ಒಟ್ಟು ₹5.75 ಕೋಟಿ ಮೌಲ್ಯದ ಆಸ್ತಿ.
5. ಪ್ರವೀಣ್ ಬಿ.ಶ್ರೀಹರಿ (ಕೆಆರ್‌ಐಡಿಎಲ್, ವಲಯ ಕಚೇರಿ ಅಧೀಕ್ಷಕ ಅಭಿಯಂತರ ಬೆಂಗಳೂರು ಜಿಲ್ಲೆ): 5 ಕಡೆ ದಾಳಿ, 2 ಸೈಟ್, 2 ಮನೆ, 11 ಎಕರೆ ಕೃಷಿ ಜಮೀನು, ₹1.15 ಕೋಟಿ ಮೌಲ್ಯದ ವಾಹನಗಳು ಸೇರಿ ಒಟ್ಟು ₹4.33 ಕೋಟಿ ಮೌಲ್ಯದ ಆಸ್ತಿ.
6. ಡಿ.ಆರ್. ಪುಷ್ಪ (ಕೃಷಿ ಮಾರಾಟ ಮಹಾ ಮಂಡಳಿ, ಹೆಚ್ಚುವರಿ ನಿರ್ದೇಶಕಿ, ಬೆಂಗಳೂರು ಜಿಲ್ಲೆ): 5 ಕಡೆ ದಾಳಿ, 1 ಸೈಟ್, 3 ಮನೆ, 1 ಕಾಂಪ್ಲೆಕ್ಸ್, 20 ಗುಂಟೆ ಕೃಷಿ ಜಮೀನು ಸೇರಿ ಒಟ್ಟು ₹5.93 ಕೋಟಿ ಮೌಲ್ಯದ ಆಸ್ತಿ.
7. ಎನ್.ಮಧುಸೂದನ್ (ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ, ತುಮಕೂರು ಜಿಲ್ಲೆ): 5 ಕಡೆ ದಾಳಿ, 3 ಸೈಟ್, 1 ಮನೆ, ₹94.04 ಲಕ್ಷ ಮೌಲ್ಯದ ಚಿನ್ನಾಭರಣಗಳು ಸೇರಿ ಒಟ್ಟು ₹2.10 ಕೋಟಿ ಮೌಲ್ಯದ ಆಸ್ತಿ.
8.ತಿಮ್ಮಯ್ಯ (ಕುಂಬಳಗೂಡು ಪಿಡಿಒ, ಬೆಂಗಳೂರು ದಕ್ಷಿಣ ಜಿಲ್ಲೆ): 6 ಕಡೆ ದಾಳಿ, 2 ಸೈಟ್, 4 ಮನೆ, 4.15 ಎಕರೆ ಕೃಷಿ ಜಮೀನು, ₹84 ಲಕ್ಷ ಮೌಲ್ಯದ ಚಿನ್ನಾಭರಣಗಳು, ಸೇರಿ ಒಟ್ಟು ₹3.50 ಕೋಟಿ ಮೌಲ್ಯದ ಆಸ್ತಿ.
9.ಕಿರಣ್ ಅಂಗಡಿ (ಸಂಶೋಧನಾ ಕೇಂದದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ, ಶಿವಮೊಗ್ಗ ಜಿಲ್ಲೆ): 5 ಕಡೆ ದಾಳಿ, 1 ಮನೆ, 1 ಎಕರೆ ಕೃಷಿ ಜಮೀನು, ₹33.94 ಲಕ್ಷ ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು ₹1.94 ಕೋಟಿ ಮೌಲ್ಯದ ಆಸ್ತಿ.
10.ಅಮೃತ್ ರಾವ್
(ಜೆಸ್ಕಾಂನ ನಿವೃತ್ತ ಸಹಾಯಕ ಇಂಜಿನಿಯರ್, ಕಲಬುರಗಿ ಜಿಲ್ಲೆ): 7 ಕಡೆ ದಾಳಿ, 3 ಸೈಟ್, 2 ಮನೆ, 1 ಫ್ಲ್ಯಾಟ್, 2 ವಾಣಿಜ್ಯ ಮಳಿಗೆ, ₹35.80 ಲಕ್ಷ ಬೆಲೆಬಾಳುವ ಕೃಷಿ ಜಮೀನು, ₹38.52 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹54.58 ಲಕ್ಷ ವಿವಿಧ ಖಾತೆಗಳಲ್ಲಿ ಇರುವ ಬ್ಯಾಂಕ್ ಬ್ಯಾಲೆನ್ಸ್ ಸೇರಿ ಒಟ್ಟು 2.65 ಕೋಟಿ ರು. ಮೌಲ್ಯದ ಆಸ್ತಿ.
