ಕನ್ನಡಪ್ರಭ ವಾರ್ತೆ ಇಂಡಿ
ನಗರದ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ಮೂರು ದಿನಗಳಿಂದ ನಡೆಸಿದ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ ಎಂದು ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ತಿಳಿಸಿದ್ದಾರೆ.ಕಚೇರಿಯಲ್ಲಿ ಅಧಿಕೃತ ಹುದ್ದೆ ಇಲ್ಲದಿದ್ದರೂ ಸಾರ್ವಜನಿಕರಿಂದ ಹಣ ವಸೂಲಿ ಹಾಗೂ ದಲ್ಲಾಳಿ ಕೆಲಸ ಮಾಡುತ್ತಿದ್ದ 12 ಜನ ಮಧ್ಯವರ್ತಿಗಳನ್ನು ಲೋಕಾಯುಕ್ತರು ಸ್ಥಳದಲ್ಲೇ ಪತ್ತೆ ಹಚ್ಚಿ, ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಿದ್ದ ₹42 ಸಾವಿರ ನಗದನ್ನು ಜಪ್ತಿ ಮಾಡಿದ್ದಾರೆ. ಪರವಾನಗಿ ನವೀಕರಿಸಿಕೊಂಡ ಬಗ್ಗೆ ಕಚೇರಿಯಲ್ಲಿ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಎಲ್ಲರೂ ಅನಧಿಕೃತ ವ್ಯಕ್ತಿಗಳೇ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರಿಕಾ ವರದಿಗಳನ್ನು ಆಧರಿಸಿ ಕಡತ ಪರಿಶೀಲಿಸಿದಾಗ, ಹೆಚ್ಚಿನ ಮೌಲ್ಯದ ನೀರಾವರಿ ಜಮೀನುಗಳನ್ನು ಕಡಿಮೆ ಮೌಲ್ಯದ ಒಣ ಬೇಸಾಯ (ಖುಷ್ಕಿ) ಜಮೀನು ಎಂದು ಸುಳ್ಳು ದಾಖಲೆ ಸೃಷ್ಟಿಸಿ ನೋಂದಣಿ ಮಾಡಲಾಗಿದೆ. ಇದರಿಂದಾಗಿ ಮುದ್ರಾಂಕ ಶುಲ್ಕದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿದೆ ಎಂಬುದು ದಾಳಿ ವೇಳೆ ಪತ್ತೆಯಾಗಿದೆ.ನಿಯಮಗಳ ಪ್ರಕಾರ ದಾನ ಪತ್ರಗಳನ್ನು ರಕ್ತ ಸಂಬಂಧಿ ಅಥವಾ ಕುಟುಂಬದ ಸದಸ್ಯರಿಗೆ ಮಾತ್ರ ಕಡಿಮೆ ವೆಚ್ಚದಲ್ಲಿ ನೋಂದಣಿ ಮಾಡಿಕೊಡಲು ಅವಕಾಶವಿದೆ. ಆದರೆ ಇಲ್ಲಿ ಕಚೇರಿ ಅಧಿಕಾರಿಗಳು ಕುಟುಂಬದ ಸದಸ್ಯರಲ್ಲದ ಹೊರಗಿನ ವ್ಯಕ್ತಿಗಳಿಗೂ ದಾನ ಪತ್ರಗಳನ್ನು ನೋಂದಣಿ ಮಾಡಿಕೊಡುವ ಮೂಲಕ ನೋಂದಣಿ ಖರ್ಚನ್ನು ಅಕ್ರಮವಾಗಿ ಕಡಿಮೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮುದ್ರಾಂಕ ಕಾಯ್ದೆ ಸೆಕ್ಷನ್ ೪೫ಎ ಅಡಿಯಲ್ಲಿ ಮೇಲ್ಮನವಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನೋಂದಣಾಧಿಕಾರಿಗಳು ದಾಖಲೆ ಮಾಡಲು ಆದೇಶ ಕಳುಹಿಸಿದ್ದರೂ, ಇಂಡಿ ಕಚೇರಿಯಲ್ಲಿ ಯಾವುದೇ ಕಾನೂನು ಕ್ರಮ ಜರುಗಿಸದೆ ನ್ಯಾಯಾಲಯದ ಆದೇಶಗಳನ್ನೇ ಗಾಳಿಗೆ ತೂರಲಾಗಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರೊಬ್ಬರು ₹3 ಲಕ್ಷ ವರ್ಗಾವಣೆ ಮಾಡಿದ್ದಾರೆ ಎಂಬ ದೂರು ಇದ್ದು, ಅದನ್ನು ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಚೇರಿಯಲ್ಲಿ ಭೂಮಿ ಕೇಂದ್ರದ ಅಧಿಕೃತ ಪಹಣಿಗಳನ್ನು ದುರುಪಯೋಗಪಡಿಸಿಕೊಂಡು, ಕೊನೆಯ ಹಂತದ ನೋಂದಣಿ ಪ್ರಕ್ರಿಯೆಗಳನ್ನು ನಿಯಮಬಾಹಿರವಾಗಿ ಮುಕ್ತಾಯಗೊಳಿಸುತ್ತಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇಂಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಂಡುಬಂದಿರುವ ಈ ಎಲ್ಲಾ ಗಂಭೀರ ಲೋಪದೋಷಗಳು ಹಾಗೂ ಭ್ರಷ್ಟಾಚಾರ ಕುರಿತು ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶಿ ಅವರು ಸಮಗ್ರ ವರದಿ ಸಿದ್ಧಪಡಿಸುತ್ತಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅನಧಿಕೃತ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಕಾನೂನು ಪ್ರಕಾರ ಪ್ರಕರಣ ದಾಖಲಿಸುತ್ತೇವೆ.
ಎರಡ್ಮೂರು ದಿನ ತನಿಖೆ ಮುಂದುವರೆಯಲಿದೆ. ಭೂಮಿ ಕೇಂದ್ರದಲ್ಲಿ ಪಹಣಿಗಳನ್ನು ತೆಗೆದುಕೊಂಡು ಸರ್ಕಾರಕ್ಕೆ ನಿಖರವಾಗಿ ಎಷ್ಟು ನಷ್ಟ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಕೊನೆಯ ದಿನ ಮಾಹಿತಿ ನೀಡುವುದಾಗಿ ಎಸ್.ಪಿ ಟಿ. ಮಲ್ಲೇಶಿ ತಿಳಿಸಿದ್ದಾರೆ.