ಕನ್ನಡಪ್ರಭ ವಾರ್ತೆ ವಿಜಯಪುರ
ಮತಪಟ್ಟಿ ಪರಿಷ್ಕರಣೆ ಒಂದು ಮಹತ್ವದ ಕಾರ್ಯವಾಗಿದ್ದು, ಇದರ ಬಗ್ಗೆ ಸಮಗ್ರ ಅರಿವು ಮೂಡಿಸಲು ಈ ವಿಶೇಷ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದು ನಾಗಠಾಣ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ದೇವಾನಂದ ಚವ್ಹಾಣ ಹೇಳಿದರು.ನಗರದ ಅಲಕುಂಟೆ ಕಲ್ಯಾಣ ಮಂಟಪದಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಬೋಗಸ್ ವೋಟರ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಅಂತ ತೆಗೆದುಹಾಕಿ ನ್ಯಾಯುಯುತ ಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗ ಎಸ್‌ಐಆರ್ (ವಿಶೇಷ ಸಮಗ್ರ ಪರಿಸ್ಕರಣೆ) ನಡೆಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಮನೆ ಮನೆಗೆ ತೆರಳಿ, ಪಕ್ಷದ ಮತದಾರರ ಹೆಸರು ಬಿಟ್ಟು ಹೋಗದಂತೆ ಗಮನಿಸಲು ಎಸ್‌ಐಆರ್ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.
2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾಗಠಾಣ, ಇಂಡಿ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿಯಿಂದ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲು ಅಣಿಯಾಗುವಂತೆ ಪಕ್ಷದ ವರಿಷ್ಠರ ನಿರ್ದೇಶನ ಇರುವುದರಿಂದ ಈಗಿನಿಂದಲೇ ಫುರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಜಿಲ್ಲೆಯ ನಾಲ್ಕು ಕ್ಷೇತ್ರ ಸೇರಿ ರಾಜ್ಯದಲ್ಲಿ 85 ರಿಂದ 100 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಈಗಾಗಲೇ ಬಿಜೆಪಿಗೆ ಬೇಡಿಕೆ ಇಟ್ಟಿದ್ದಾರೆ ಎಂದರು.ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ನಿಂಗನಗೌಡ ಸೋಲಾಪುರ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ದೇವಾನಂದ ಚವ್ಹಾಣ ಅವರಿಗೆ ಟಿಕೆಟ್ ನೀಡಲೇಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು. ನಾಗಠಾಣ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೆ ತಮ್ಮದೇ ಆದ ಕೊಡುಗೆ ನೀಡಿದ ಚವ್ಹಾಣ ಅವರ ಕೈಬಲಪಡಿಸಬೇಕು ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ದೇವಾನಂದ ಚವ್ಹಾಣ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಸಂಪನ್ಮೂಲ ವ್ಯಕ್ತಿ ಶಿವಶಂಕರ ಮಾತನಾಡಿದರು. ಜಿಪಂ. ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ, ಪೀರಪಾಷಾ ಗಚ್ಚಿನಮಹಲ್, ಸಂಜೀವ ದೊಡಮನಿ ಇತರರು ಉಪಸ್ಥಿತರಿದ್ದರು.
ನಾಗಠಾಣ ಕ್ಷೇತ್ರದ ಕಾರ್ಯಕರ್ತರ ಜೊತೆ ನಾನು ಸದಾ ಇರುವೆ. ಕಾರ್ಯಕರ್ತರು ಸಹ ನನ್ನ ಜೊತೆ ಬೆನ್ನುಲುಬಾಗಿ ಇರಬೇಕು. ಪಕ್ಷದ ಕಾರ್ಯಕರ್ತರೇ ನನ್ನ ಬಲ, ಅವರು ನನ್ನ ಹಿಂದೆ ಇದ್ದರೆ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ.
-ದೇವಾನಂದ ಚವ್ಹಾಣ, ಮಾಜಿ ಶಾಸಕ, ನಾಗಠಾಣ ಕ್ಷೇತ್ರ.