ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಾಭರಣಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ, ಸಗಟು ಚಿನ್ನಾಭರಣ ವ್ಯಾಪಾರಿಯಿಂದ ಸುಮಾರು 5.20 ಕೋಟಿ ರು. ಮೌಲ್ಯದ 3.625 ಕೆ.ಜಿ ಚಿನ್ನಾಭರಣಗಳನ್ನು ಪಡೆದು ವಂಚಿಸಿರುವ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಾಜಿ ಅಭಿಷೇಕ್‌ ಎಂಬುವರು ನೀಡಿದ ದೂರಿನನ್ವಯ ರೋಹಿತ್‌ ಕುಮಾರ್‌ ಸಂತೋಷ್ ಕುಮಾರ್ (33) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ರೋಹಿತ್ ಕುಮಾರ್ ಕಳೆದ 2 ವರ್ಷಗಳಿಂದ ಎಂ.ಪಿ.ಜ್ಯುವೆಲ್ಸ್ ಕ್ರಾಫ್ಟ್ ಎಂಬ ಸಂಸ್ಥೆಯೊಂದಿಗೆ ವ್ಯವಹಾರ ನಡೆಸುತ್ತಿದ್ದು, ಆರಂಭದಲ್ಲಿ ಚಿನ್ನಾಭರಣಗಳನ್ನು ಪಡೆದು ಮಾರಾಟ ಮಾಡಿದ ಹಣವನ್ನು ಅಥವಾ ಮಾರಾಟವಾಗದ ಆಭರಣಗಳನ್ನು ಸಮಯಕ್ಕೆ ಸರಿಯಾಗಿ ಹಿಂದಿರುಗಿಸಿ ನಂಬಿಕೆ ಗಳಿಸಿದ್ದ. ಜು.7 ರಿಂದ 20ರ ಅವಧಿಯಲ್ಲಿ 3 ಬಾರಿ ವಿವಿಧ ಪ್ರಮಾಣದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ ಆತ, ಮಾರಾಟವಾಗದ ಆಭರಣಗಳ ಒಂದು ಭಾಗವನ್ನು ಹಿಂದಿರುಗಿಸಿ, ಉಳಿದವುಗಳನ್ನು ಸಾಗರ್ ಜ್ಯುವೆಲ್ಸ್ ಹಾಗೂ ಗಜರಾಜ್ ಜ್ಯುವೆಲ್ಸ್‌ಗೆ ಮಾರಾಟ ಮಾಡಿದ್ದು, ಅವರು ಹಣ ನೀಡಲಿದ್ದಾರೆ ಎಂದು ಹೇಳಿದ್ದ ಎನ್ನಲಾಗಿದೆ. ಆದರೆ ದೂರುದಾರ ಅಭಿಷೇಕ್‌ ಸಂಬಂಧಿತ ಜ್ಯುವೆಲ್ಲರಿ ಅಂಗಡಿಗಳನ್ನು ಸಂಪರ್ಕಿಸಿದಾಗ, ರೋಹಿತ್‌ನಿಂದ ನಾವು ಅವರಿಂದ ಯಾವುದೇ ಚಿನ್ನಾಭರಣ ಖರೀದಿಸಿಲ್ಲ ಎಂದು ತಿಳಿಸಿದ್ದಾರೆ, ಆರೋಪಿ ಉಳಿದ 3.625 ಕೆಜಿ ಚಿನ್ನಾಭರಣಗಳನ್ನು ಹಿಂದಿರುಗಿಸದೇ ಸಂಪರ್ಕಕ್ಕೂ ಸಿಗದೆ ವಂಚನೆ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.