ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ । ಬಡಿದಾಡಿಕೊಂಡ ಹಿರಿಯ, ಕಿರಿಯ ವಿದ್ಯಾರ್ಥಿಗಳು

ಕನ್ನಡಪ್ರಭ ವಾರ್ತೆ ಹಾಸನ

ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ರ್‍ಯಾಗಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ರ್‍ಯಾಗಿಂಗ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳಿಂದ ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದ್ದು, ಕಿರಿಯ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಹಿರಿಯ ವಿದ್ಯಾರ್ಥಿಗಳಿಂದ ಅವಮಾನಕಾರಿ ವರ್ತನೆ, ಒತ್ತಡ ಮತ್ತು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಕಿರಿಯ ವಿದ್ಯಾರ್ಥಿಗಳು, ಈ ವಿಚಾರವನ್ನು ಪ್ರಶ್ನಿಸಲು ಮುಂದಾಗಿದ್ದರು.

ಇದೇ ವೇಳೆ ಮಾತಿನ ಚಕಮಕಿ ತೀವ್ರಗೊಂಡು ವಾಗ್ವಾದ ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು. ರಾತ್ರಿ ವೇಳೆ ಹಾಸ್ಟೆಲ್‌ನಲ್ಲೇ ಸೀನಿಯರ್ ಹಾಗೂ ಜ್ಯೂನಿಯರ್ ವಿದ್ಯಾರ್ಥಿಗಳು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು, ಗಲಾಟೆ ತೀವ್ರ ಸ್ವರೂಪ ಪಡೆದಿತ್ತು. ಕೆಲವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಲು ಯತ್ನಿಸಿದರೂ ಉದ್ವಿಗ್ನತೆ ಹೆಚ್ಚಾಗಿ ಹಲವು ವಿದ್ಯಾರ್ಥಿಗಳು ಗಾಯಗೊಂಡರು. ಗಲಾಟೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಮುಖ, ಕೈ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆ ನೀಡಲಾಗಿದೆ. ಕೆಲವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಘಟನೆಯ ಮಾಹಿತಿ ತಿಳಿದು ಹಾಸನ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ಗಲಾಟೆಗೆ ಕಾರಣವಾದ ನಿಖರ ಸಂಗತಿಗಳ ಕುರಿತು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಹಾಸ್ಟೆಲ್ ವಾರ್ಡನ್, ಕಾಲೇಜು ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ವಿದ್ಯಾರ್ಥಿಗಳಿಂದ ಪ್ರತ್ಯೇಕ ಹೇಳಿಕೆ ಪಡೆದಿದ್ದಾರೆ. ರ್‍ಯಾಗಿಂಗ್ ಆರೋಪ ಸಾಬೀತಾದಲ್ಲಿ ಕಾನೂನು ಕ್ರಮದ ಜೊತೆಗೆ ಕಾಲೇಜು ಆಡಳಿತದಿಂದಲೂ ಕಠಿಣ ಶಿಸ್ತು ಕ್ರಮ ಜರುಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರ್‍ಯಾಗಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ನಿಷೇಧವಾಗಿದ್ದರೂ, ಕೆಲವೆಡೆ ಇನ್ನೂ ಈ ಕಿರುಕುಳದ ಪ್ರಕರಣಗಳು ಮುಂದುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ ವಸತಿ ನಿಲಯಗಳಲ್ಲಿ ಹೊಸದಾಗಿ ಸೇರುವ ವಿದ್ಯಾರ್ಥಿಗಳು ಮಾನಸಿಕವಾಗಿ ಹಿಂಸೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.ಕಾಲೇಜು ಆಡಳಿತವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರ್‍ಯಾಗಿಂಗ್ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವುದಾಗಿ ತಿಳಿಸಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ. ಈ ಘಟನೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್ ತಡೆಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.