ತಾಲೂಕಿನ ಶೀಗಿಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ, ಸರ್ಕಾರದ ಅನುದಾನದ ಜತೆಗೆ ಸಂಘ-ಸಂಸ್ಥೆಗಳು, ಉದ್ಯಮಿಗಳು ಹಾಗೂ ಸಹೃದಯಿ ದಾನಿಗಳ ನೆರವು ಪಡೆದು ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ಹಾನಗಲ್ಲ: ತಾಲೂಕಿನ ಶೀಗಿಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ, ಸರ್ಕಾರದ ಅನುದಾನದ ಜತೆಗೆ ಸಂಘ-ಸಂಸ್ಥೆಗಳು, ಉದ್ಯಮಿಗಳು ಹಾಗೂ ಸಹೃದಯಿ ದಾನಿಗಳ ನೆರವು ಪಡೆದು ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ಶಾಲೆಯ ಶಿಕ್ಷಕ ವೀರೇಶ ಶಿಡೇನೂರ ಅವರು ಶಾಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಚಯಿಸಿ, ಪ್ರವೇಶದ್ವಾರ, ಧ್ವಜಸ್ತಂಭ, ಸ್ಮಾರ್ಟ್ ಕಲಿಕಾ ವ್ಯವಸ್ಥೆ, ವಿಜ್ಞಾನ ಕಿಟ್, ಕಟ್ಟಡ ದುರಸ್ತಿ, ವರ್ಲಿ ಕಲಾಕೃತಿ, ಕಂಪ್ಯೂಟರ್ ಪ್ರಯೋಗಾಲಯ, ಯುಪಿಎಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ನೆರವಾದ ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಯೋಜನೆಗಳ ಪರಿಕಲ್ಪನೆಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.ಈ ಸಂದರ್ಭದಲ್ಲಿ ಉದ್ಯಮಿ ವಿಜಯ ಮಾನೆ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರ ಪರಿಕಲ್ಪನೆಯಂತೆ ಆಧುನಿಕ ಆಲೋಚನೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ಸರ್ಕಾರದ ಅನುದಾನದ ಜತೆಗೆ ಖಾಸಗಿ ಸಂಘ-ಸಂಸ್ಥೆಗಳು, ಉದ್ಯಮಿಗಳು ಹಾಗೂ ದಾನಿಗಳ ನೆರವು ಪಡೆದು ಶಾಲೆಗಳ ಅಗತ್ಯಗಳನ್ನು ಈಡೇರಿಸುವ ಪ್ರಯತ್ನ ನಡೆದಿದೆ. ಶಾಸಕರ ಆಶಯದಂತೆ ಜಾರಿಗೊಳಿಸಿರುವ ೫೦:೫೦ ಕಾರ್ಯಕ್ರಮದಡಿ ೧೫೦ಕ್ಕೂ ಹೆಚ್ಚು ಶಾಲೆಗಳಿಗೆ ರು. ೪ ಕೋಟಿ ಅಧಿಕ ವೆಚ್ಚದಲ್ಲಿ ಡೆಸ್ಕ್, ಲ್ಯಾಪ್ಟಾಪ್, ಕಂಪ್ಯೂಟರ್, ಪೀಠೋಪಕರಣ, ಕಲಿಕೋಪಕರಣ, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಪ್ರಮುಖವಾಗಿ ಹಾನಗಲ್ ನಗರದ ಶಾಸಕರ ಮಾದರಿ ಶಾಲೆಯಲ್ಲಿ ಸರಕಾರದ ಅನುದಾನದ ನೆರವಿಲ್ಲದೆ ರು. ೨.೪೦ ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಲಾಗುತ್ತಿದೆ. ಓಸ್ಯಾಟ್, ಶಿ ಫಾರ್ ಸೊಸೈಟಿ, ರೌಂಡ್ ಟೇಬಲ್ ಇನ್ನಿತರ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ನಿಟಗಿನಕೊಪ್ಪ, ಕೊಪ್ಪರಸಿಕೊಪ್ಪ, ಯಳವಟ್ಟಿ, ಹೇರೂರು, ಆರೆಗೊಪ್ಪ ಹೀಗೆ ಹಲವು ಶಾಲೆಗಳ ಕಟ್ಟಡಗಳನ್ನು ಖಾಸಗಿ ಸಂಸ್ಥೆಗಳ ಸಹಾಯದಿಂದ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ೫ ಪ್ರೌಢಶಾಲೆಗಳಲ್ಲಿ ಹೈಟೆಕ್ ಕಂಪ್ಯೂಟರ್ ಪ್ರಯೋಗಾಲಯ ಹಾಗೂ ೫೦ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಅಳವಡಿಸಲಾಗಿದೆ. ಈ ಮೂಲಕ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೇವಲ ಅನುದಾನಕ್ಕೆ ಕಾಯದೇ ಶಾಲೆಗಳ ಅಗತ್ಯಗಳನ್ನು ಗುರುತಿಸಿ, ಸೂಕ್ತ ಯೋಜನೆ ರೂಪಿಸಿ, ದಾನಿಗಳು ಹಾಗೂ ಸಂಘ-ಸಂಸ್ಥೆಗಳ ನೆರವು ಪಡೆಯುವಲ್ಲಿ ಎಸ್ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ಮುತುವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ ಬೈಚವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಹಾಯದೊಂದಿಗೆ ₹ ೩೦ ಲಕ್ಷ ವೆಚ್ಚದಲ್ಲಿ ಸೌಲಭ್ಯ ಒದಗಿಸಲಾಗಿದೆ. ಇದೇ ರೀತಿ ಹಳೆಯ ವಿದ್ಯಾರ್ಥಿಗಳು, ಸಮುದಾಯ ಹಾಗೂ ಸಂಘ, ಸಂಸ್ಥೆಗಳ ಸಹಭಾಗಿತ್ವದಿಂದ ಶಾಲೆಗಳಲ್ಲಿ ಗುಣಮಟ್ಟದ ಕಲಿಕಾ ವಾತಾವರಣ ನಿರ್ಮಿಸಲು ಸಾಧ್ಯವಿದ್ದು, ನಾವೆಲ್ಲ ಸೇರಿದಂತೆ ಪ್ರಯತ್ನ ಮಾಡಬೇಕಿದೆ ಎಂದರು.
ಬಿಇಒ ಆರ್.ವಿ.ಚಿನ್ನಿಕಟ್ಟಿ, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯೆ ಅನಿತಾ ಶಿವೂರ, ಸಿಇಒ ಬಸವರಾಜ ಸಂಗೂರ, ಎಸ್ಡಿಎಂಸಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಸದಸ್ಯರಾದ ಜಗದೀಶ್ ಉಳ್ಳಾಗಡ್ಡಿ, ಪ್ರಕಾಶ ನಂದಿಹಳ್ಳಿ, ಮಲ್ಲಪ್ಪ ಕೋರಿ, ಮೈಲಾರೆಪ್ಪ ಕಳಸೂರ ಇದ್ದರು.