ಆ ಕಾಲದವರಿಗೆ ನಿನ್ನ ಜನ್ಮದಿನ ಯಾವಾಗ? ಎಂದು ಕೇಳಿದರೆ, ನನಗಿಂತ ನಮ್ಮ ಮಾಸ್ತರ್‌ಗೆ ಚೆನ್ನಾಗಿ ಗೊತ್ತು ಎನ್ನುವ ಪರಿಸ್ಥಿತಿ ಇತ್ತು. ಆ ಕಾಲದಲ್ಲಿ ಮಗುವಿಗೆ ಹೆಸರಿಡುವ ಅಧಿಕಾರ ತಂದೆ-ತಾಯಿಗಿದ್ದರೆ, ಹುಟ್ಟಿದ ದಿನಾಂಕ ನಿಗದಿಪಡಿಸುವ ಅಧಿಕಾರ ಮಾತ್ರ ಮಾಸ್ತರ್‌ರಿಗೇ ಇತ್ತು
ಆ ಕಾಲದವರಿಗೆ ನಿನ್ನ ಜನ್ಮದಿನ ಯಾವಾಗ? ಎಂದು ಕೇಳಿದರೆ, ನನಗಿಂತ ನಮ್ಮ ಮಾಸ್ತರ್‌ಗೆ ಚೆನ್ನಾಗಿ ಗೊತ್ತು ಎನ್ನುವ ಪರಿಸ್ಥಿತಿ ಇತ್ತು. ಆ ಕಾಲದಲ್ಲಿ ಮಗುವಿಗೆ ಹೆಸರಿಡುವ ಅಧಿಕಾರ ತಂದೆ-ತಾಯಿಗಿದ್ದರೆ, ಹುಟ್ಟಿದ ದಿನಾಂಕ ನಿಗದಿಪಡಿಸುವ ಅಧಿಕಾರ ಮಾತ್ರ ಮಾಸ್ತರ್‌ರಿಗೇ ಇತ್ತು ಎಂದಾಗ ಸಭೆಯಲ್ಲಿ ನಗು ತುಂಬಿಕೊಂಡಿತು.
ಹಿಂದೆಲ್ಲಾ ಹುಟ್ಟಿದ ದಿನಾಂಕ, ವೇಳೆ ಜಾತಕ ಬರೆಯಿಸುವ ಪದ್ಧತಿ ಕೆಲವು ವರ್ಗಗಳ ಮನೆಯಲ್ಲಿ ಮಾತ್ರ ನಡೆಯುತ್ತಿತ್ತು. ಅಷ್ಟಕ್ಕೂ ಹುಟ್ಟಿದ ದಿನಾಂಕ ಬರೆದಿಟ್ಟುಕೊಳ್ಳುವ ಜರೂರತ್ತು ಬಹುಶಃ ಇರಲಿಲ್ಲವೆಂದು ಕಾಣುತ್ತದೆ. ಬಹಳ ಹಳೆಯ ತಲೆಮಾರಿನ ಜನರಿಗೆ ಯಾವಾಗ ಹುಟ್ಟಿದ್ದು ಕೇಳಿದರೆ ಹಬ್ಬ, ಜಾತ್ರೆ ಇತ್ತು ಎಂದೆಲ್ಲಾ ಹೇಳುವುದು ಸಾಮಾನ್ಯ.
ನಮ್ಮ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದರೆ ನಾವು ಯಾವಾಗ ಹುಟ್ಟಿದ್ದೇವೋ ಗೊತ್ತಿಲ್ಲ. ಅಂದರೆ, ಹುಟ್ಟಿದ ದಿನಾಂಕವನ್ನು ಮಾಸ್ತರ್‌ರೇ ಬರೆಯುತ್ತಾರಂತೆ...ಈ ಮಾತನ್ನು ಖುದ್ದು ಜಾರಕಿಹೊಳಿ ಸಾಹೇಬ್ರೆ ತಮ್ಮ ಹುಟ್ಟಿದ ದಿನಾಂಕದ ಗುಟ್ಟನ್ನು ಬಿಚ್ಚಿಟ್ಟ ಪ್ರಸಂಗ ಇತ್ತೀಚೆಗೆ ನಡೆಯಿತು.
ಬೆಳಗಾವಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಮಗು ಹುಟ್ಟಿದ ದಿನವನ್ನು ನೆನಪಿಟ್ಟುಕೊಳ್ಳುವುದಕ್ಕಿಂತ, ಮಳೆಗಾಲ ಶುರುವಾಗಿತ್ತು, ಜಾತ್ರೆ ನಡೆದಿತ್ತು, ಬೆಳೆ ಕಟಾವು ಮುಗಿದಿತ್ತು ಆಗ ಹುಟ್ಟಿದ್ದೆ ಎಂಬುದೇ ಜನ್ಮದಿನದ ದಾಖಲೆ ಆಗಿತ್ತು. ಶಾಲೆಗೆ ಸೇರಿಸುವ ಸಮಯ ಬಂದಾಗ ತಂದೆ-ತಾಯಿ ಮಗುವನ್ನು ಕರೆದುಕೊಂಡು ಹೋಗಿ, ಮಾಸ್ತರೇ, ಇಷ್ಟು ವಯಸ್ಸು ಇರಬೇಕಷ್ಟೆ... ನೀವೇ ಬರೆದುಕೊಳ್ಳಿ ಎಂದು ಹೇಳುತ್ತಿದ್ದರು.
ಆಗ ಮಾಸ್ತರ್ ಪೆನ್ನಿನ ಒಂದು ಗೆರೆಯೇ ಮಕ್ಕಳ ಅಧಿಕೃತ ಜನ್ಮದಿನವಾಗುತ್ತಿತ್ತು. ಅದಕ್ಕೇ ಅನೇಕರ ಜನ್ಮದಿನ ಜೂ.1 ಆಗಿರುವುದು ಕಾಕತಾಳೀಯ. ಶಾಲೆ ಆರಂಭವಾಗುವ ತಿಂಗಳು ಜೂನ್ ಆಗಿದ್ದರಿಂದ, ಶಿಕ್ಷಕರಿಗೂ ಅದೇ ಸುಲಭದ ಲೆಕ್ಕ ಆಗಿತ್ತು. ಇಂದಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ, ಆಧಾರ್, ಆಸ್ಪತ್ರೆಯ ದಾಖಲೆಗಳೆಲ್ಲ ಇವೆ. ಆದರೆ ಆ ಕಾಲದವರಿಗೆ ನಿನ್ನ ಜನ್ಮದಿನ ಯಾವಾಗ? ಎಂದು ಕೇಳಿದರೆ, ನನಗಿಂತ ನಮ್ಮ ಮಾಸ್ತರ್‌ಗೆ ಚೆನ್ನಾಗಿ ಗೊತ್ತು ಎನ್ನುವ ಪರಿಸ್ಥಿತಿ ಇತ್ತು. ಆ ಕಾಲದಲ್ಲಿ ಮಗುವಿಗೆ ಹೆಸರಿಡುವ ಅಧಿಕಾರ ತಂದೆ-ತಾಯಿಗಿದ್ದರೆ, ಹುಟ್ಟಿದ ದಿನಾಂಕ ನಿಗದಿಪಡಿಸುವ ಅಧಿಕಾರ ಮಾತ್ರ ಮಾಸ್ತರ್‌ರಿಗೇ ಇತ್ತು ಎಂದಾಗ ಸಭೆಯಲ್ಲಿ ನಗು ತುಂಬಿಕೊಂಡಿತು.
ರಟ್ಟಾಗದ ಹೊಗಳಿಕೆಯ ಗುಟ್ಟು....
ಅದೊಂದು ಅಪ್ಪಟ ಸರ್ಕಾರಿ ಕಾರ್ಯಕ್ರಮ, ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುವ ಸಮಾರಂಭ. ಇಂತಹ ಕಾರ್ಯಕ್ರಮದಲ್ಲಿ ಸಹಜವಾಗಿ ಸರ್ಕಾರದ ಸಾಧನೆ, ಅಭಿವೃದ್ಧಿಗಳ ಬಗ್ಗೆ ಮಾತನಾಡುವುದೇ ಹೆಚ್ಚು. ಆದರೆ ಸರ್ಕಾರದ ಸಾಧನೆಗಿಂತ ಹೆಚ್ಚಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಬ್ಬರಾದ ಮೇಲೆ ಒಬ್ಬರು ಭರ್ಜರಿಯಾಗಿ ಹೊಗಳಿದ ಗುಟ್ಟು ಮಾತ್ರ ಯಾರಿಗೂ ಗೊತ್ತಾಗಲಿಲ್ಲ!
ಇಂತಹ ಪ್ರಸಂಗ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸೇರಿ ಗಣ್ಯರು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಿಕ್ಕಾಪಟ್ಟೆ ಅಭಿನಂದಿಸುವ ರೀತಿಯಲ್ಲಿ ಮಾತನಾಡತೊಡಗಿದರು.
ಗಣ್ಯರ ಮಾತು ಕೇಳುತ್ತಿದ್ದ ವೇದಿಕೆ ಮುಂದಿದ್ದವರಿಗೆ ಸಚಿವರು ಬಂದಾಗ ಸರ್ಕಾರ, ಸಾಧನೆಯನ್ನು ಹೊಗಳಿ ಮಾತನಾಡುತ್ತಿದ್ದವರು ಏಕಾಏಕಿ ಉಸ್ತುವಾರಿ ಸಚಿವರನ್ನು ಯಾಕೆ ಹೊಗಳುತ್ತಿದ್ದಾರೆ ಎಂದು ಗುಸು ಗುಸು ಮಾತನಾಡುವಂತಾಯಿತು.
ಪ್ರಸಕ್ತ ಸಚಿವ ಸಂಪುಟ ಪುನರ್‌ರಚನೆ, ಸಂಪುಟ ವಿಸ್ತರಣೆಯ ಸೂಚನೆ ಇತ್ಯಾದಿ ಬಹು ಚರ್ಚಿತ ವಿಷಯಗಳಿಗೆ ಈ ಹೊಗಳಿಕೆ ಇಂಬು ನೀಡಿತ್ತು. ಇದು ಕೇವಲ ಹೊಗಳಿಕೆ ಭಾಷಣವೋ ಅಥವಾ ಉಸ್ತುವಾರಿ ಸಚಿವರಿಗೆ ವಿದಾಯ ಭಾಷಣವೋ ಎಂದು ಅಲ್ಲಿದ್ದವರಲ್ಲಿ ಜಿಜ್ಞಾಸೆ ಮೂಡುವಂತೆ ಮಾಡಿತ್ತು.
ಹೀಗೆ ಎಲ್ಲರ ಹೊಗಳಿಕೆ ನೋಡಿದ ಸುದ್ದಿಗಾರರು ಸುಮ್ಮನೆ ಬಿಡಬೇಕಲ್ಲ, ಭಾಷಣ ಮುಗಿಸಿ ಹೊರಬಂದ ಉಸ್ತುವಾರಿ ಸಚಿವರನ್ನು ಕೇಳಿಯೇ ಬಿಟ್ಟರು. ಅದಕ್ಕೆ ಉಸ್ತುವಾರಿ ಸಚಿವರು ಮಾಮೂಲಿನಂತೆ, ‘ಹಾಗೇನಿಲ್ಲ. ಏನೆಲ್ಲಾ ಆಗಬಹುದು ಎಂದು ಹೇಳಲಾಗದು. ಮುಂದಿನ ತಿಂಗಳು ಆಗಲೂ ಬಹುದು’ ಎಂದು ನಗುತ್ತಾ ಪ್ರತಿಕ್ರಿಯಿಸಿದಾಗ, ತಲೆ ಕೆರೆಯುವ ಸರದಿ ಸುದ್ದಿಗಾರರದ್ದಾಗಿತ್ತು.

