ಬಸವರಾಜ ಹಿರೇಮಠ

 ಧಾರವಾಡ: ಇನ್ಮುಂದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಶಿಕ್ಷಕರೇ ಬೇಕಾಗಿಲ್ಲ. ಮೌಲ್ಯಮಾಪನಕ್ಕೆ ದಿನಗಟ್ಟಲೆ ಸಮಯವೂ ಬೇಕಾಗಿಲ್ಲ. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದ ‘ಡಿಜಿಟ್ಯೂಟರ್‌’ ಎಐ ತಂತ್ರಜ್ಞಾನವು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಕ್ಷಣ ಮಾತ್ರದಲ್ಲಿ ಮೌಲ್ಯಮಾಪನ ಮಾಡಲು ಸಿದ್ಧವಾಗಿದೆ.

ರಾಜ್ಯದ ಶಾಲೆ ಮತ್ತು ಕಾಲೇಜು ಶಿಕ್ಷಣದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಕೆ ಶುರುವಾಗಿದೆ. ಈ ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಧಾರವಾಡ ಐಐಟಿ ತಂತ್ರಜ್ಞರು ದೇಶದಲ್ಲೇ ಮೊದಲ ಬಾರಿಗೆ ಸ್ವಯಂಚಾಲಿತವಾಗಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ತಂತ್ರಜ್ಞಾನ ಸಂಶೋಧಿಸಿ ಯಶಸ್ವಿಯಾಗಿದ್ದಾರೆ. ಶಿಕ್ಷಕರ ಮೌಲ್ಯಮಾಪನದ ಹೊರೆ ಕಡಿಮೆ ಮಾಡುವುದು, ತರಗತಿಯಲ್ಲಿ ಬೋಧನೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಸಮಯ ವಿನಿಯೋಗಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈ ‘ಡಿಜಿಟ್ಯೂಟರ್‌’ ತಂತ್ರಜ್ಞಾನ ಸಿದ್ಧಪಡಿಸಲಾಗಿದೆ.

ಪ್ರಾಯೋಗಿಕ ಕಾರ್ಯ:

ಈ ಕುರಿತು ಮಾಹಿತಿ ನೀಡಿದ ಐಐಟಿ ಧಾರವಾಡದ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಪ್ರೊ.ಕೋಟೇಶ್ವರ ರಾವ್, ಶಿಕ್ಷಣ ಇಲಾಖೆಗೆ ಪ್ರತಿ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಬೋರ್ಡ್‌ ಪರೀಕ್ಷೆಗಳ ಸಮಯದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯನ್ನು ಕರಾರುವಕ್ಕಾಗಿ ಹಾಗೂ ಸ್ವಯಂಚಾಲಿತವಾಗಿ ಮೌಲ್ಯಮಾಪನ ಮಾಡಲು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿಯೇ ಧಾರವಾಡ ಐಐಟಿ ಈ ತಂತ್ರಜ್ಞಾನ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದು, ₹5 ಕೋಟಿ ಅನುದಾನದೊಂದಿಗೆ ನಾವು ‘ಡಿಜಿಟ್ಯೂಟರ್’ ನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದೇವೆ. ಜತೆಗೆ, ಅದು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಾರ್ಯ ಮಾಡಲು ಸಿದ್ಧವಾಗಿದೆ ಎಂದರು.


ಸ್ಕ್ಯಾನ್‌, ಅಪಲೋಡ್‌:

ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಈ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಈ ಸಾಫ್ಟವೇರ್‌ ಮೂಲಕ ಸ್ಕ್ಯಾನ್‌ ಮಾಡಿದರೆ ಸಾಕು, ಅದು ವಿದ್ಯಾರ್ಥಿಗಳು ಬರೆದ ಉತ್ತರ ಆಧರಿಸಿ ಅಂಕ ನೀಡುತ್ತದೆ. ಪ್ರಾಯೋಗಿಕ ಹಂತದ ಭಾಗವಾಗಿ ಇದನ್ನು ಸೆಪ್ಟೆಂಬರ್‌ನಿಂದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗದಲ್ಲಿ ಪರಿಚಯಿಸಲಾಗುವುದು. ಶಾಲಾಮಟ್ಟದಲ್ಲಿ ಎಐ ಆಧಾರಿತ ಉತ್ತರ ಪತ್ರಿಕೆ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದ ಪ್ರೊ.ರಾವ್ ಹೆಮ್ಮೆ ವ್ಯಕ್ತಪಡಿಸಿದರು. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಆಗುವ ನಿರೀಕ್ಷೆ ಹೆಚ್ಚಿದೆ ಎಂದರು.

ಪ್ರಶ್ನೆ ಕೇಳಿದರೂ ಉತ್ತರ:

‘ಡಿಜಿಟ್ಯೂಟರ್’ ಬಗ್ಗೆ ‘ಕನ್ನಡಪ್ರಭ’ಕ್ಕೆ ಹೆಚ್ಚಿನ ಮಾಹಿತಿ ಒದಗಿಸಿದ ಐಐಟಿ ಶೈಕ್ಷಣಿಕ ಡೀನ್ ಪ್ರೊ.ನವೀನ್ ಎಂ.ಬಿ., ಸ್ವಯಂಚಾಲಿತ ಮೌಲ್ಯಮಾಪನ ಸಾಧನಕ್ಕಿಂತ ‘ಡಿಜಿಟ್ಯೂಟರ್‌’ ಹೆಚ್ಚಿನ ಕಾರ್ಯ ಮಾಡಲಿದೆ. ಇದು ಸಮಗ್ರ ಎಐ-ಚಾಲಿತ ಶೈಕ್ಷಣಿಕ ಸಹಾಯಕವು ಹೌದು. ವಿದ್ಯಾರ್ಥಿಗಳು ಟೈಪ್ ಮಾಡುವ ಮೂಲಕ ಅಥವಾ ಧ್ವನಿ ಆಜ್ಞೆಗಳ ಮೂಲಕ ಪ್ರಶ್ನೆಗಳನ್ನೂ ಕೇಳಬಹುದು. ಇದು ಕನ್ನಡ ಮಾತ್ರವಲ್ಲದೇ ಭಾರತೀಯ ಎಲ್ಲ ಭಾಷೆಗಳನ್ನು ಅರಿತು ಪರಿಹಾರ ಒದಗಿಸುತ್ತದೆ. ಈ ತಂತ್ರಜ್ಞಾನವು ವಸ್ತುನಿಷ್ಠ ಮತ್ತು ವಿವರಣಾತ್ಮಕ ಉತ್ತರಗಳನ್ನು ಮೌಲ್ಯಮಾಪನ ಮಾಡಲಿದೆ. ಮೌಲ್ಯಮಾಪನಕ್ಕಾಗಿ ಖರ್ಚು ಮಾಡುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ‘ಡಿಜಿಟ್ಯೂಟರ್’, ಶಿಕ್ಷಕರು ಬೋಧನೆ, ಮಾರ್ಗದರ್ಶನ ಮತ್ತು ಕಲಿಕೆಯ ಫಲಿತಾಂಶ ಸುಧಾರಿಸುವತ್ತ ಹೆಚ್ಚು ಗಮನ ಹರಿಸುವುದನ್ನು ನಿರೀಕ್ಷಿಸಲಾಗಿದೆ ಎಂದರು.

ಡಿಜಿಟ್ಯೂಬರ್‌ ಕೆಲಸ ಹೇಗೆ

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಧಾರವಾಡ ಐಐಟಿ ತಂತ್ರಜ್ಞರಿಂದ ಡಿಜಿಟ್ಯೂಬರ್‌ ಅಭಿವೃದ್ಧಿ

6- 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇದರ ಅಭಿವೃದ್ಧಿ

ಉತ್ತರಪತ್ರಿಕೆ ಸ್ಕ್ಯಾನ್‌ ಮಾಡಿದರೆ ಈ ತಂತ್ರಜ್ಞಾನ ಮೌಲ್ಯಮಾಪನ ಮಾಡಿ ಅಂಕಗಳನ್ನು ಮಾಡುತ್ತೆ

ಕನ್ನಡ ಮಾತ್ರವಲ್ಲದೇ ಯಾವುದೇ ಭಾಷೆಯನ್ನು ಬೇಕಾದರೂ ಅರಿತು ಮೌಲ್ಯಮಾಪನ ಮಾಡಬಲ್ಲದು

ಪ್ರಾಯೋಗಿಕವಾಗಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗದಲ್ಲಿ ಪರಿಚಯಕ್ಕೆ ನಿರ್ಧಾರ

ಈ ತಂತ್ರಜ್ಞಾನ ಅಭಿವೃದ್ಧಿಗೆ ಹಿಂದಿನ ಸಿಎಂ ಸಿದ್ಧರಾಮಯ್ಯ ಅವಧಿಯಲ್ಲಿ 5 ಕೋಟಿ ಅನುದಾನ