ನವದೆಹಲಿ : ‘ದಯಮಾಡಿ ನನ್ನನ್ನು ಅಣ್ಣನನ್ನಾಗಿ ಮಾಡಿಕೊಳ್ಳೋದು ಬೇಡ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕೈಮುಗಿದು ವಿನಂತಿಸಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ‘ಅವಶ್ಯಕತೆ ಇಲ್ಲ ಎಂದಾದರೆ ಬಿಡದಿ ಟೌನ್‌ಶಿಪ್‌ ಯೋಜನೆಗೆ ಏಕೆ ಕೈ ಹಾಕಬೇಕು’ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ, ಟೌನ್‌ಶಿಪ್‌ ಯೋಜನೆಗೆ ಫೈನಲ್‌ ನೋಟಿಫಿಕೇಷನ್ ಮಾಡುವುದಕ್ಕೂ ಮುಂಚೆ ರೈತರನ್ನು ಕರೆಸಿ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಎಚ್ಡಿಕೆ, ಬಿಡದಿ ಟೌನ್‌ಶಿಪ್‌ ವಿಷಯವಾಗಿ ಸಿಎಂ ಡಿಕೆಶಿ ವಿರುದ್ಧ ಹರಿಹಾಯ್ದರು. ಡಿಕೆಶಿಯವರು ಸಿಎಂ ಆದ ದಿನದಿಂದ ತಮ್ಮ ಸ್ವಂತಿಕೆ ಮೆರೆಯುತ್ತಿಲ್ಲ. ವಿಧಾನಸೌಧದ ಮೆಟ್ಟಿಲಿಗೆ ಕೈ ಮುಗಿದು, ತಲೆ ಬಾಗಿದ್ದು ಕೂಡ ಕಾಪಿ ಮಾಡಿದ್ದು. ಈ ಹಿಂದೆ ಮೋದಿ ಮಾಡಿದ್ದನ್ನೇ ಇವರು ಕಾಪಿ ಮಾಡಿದ್ದಾರೆ ಎಂದು ಆರೋಪಿಸಿದರು.

ನನಗೆ ಬಿಡದಿ ಯೋಜನೆಯ ಅವಶ್ಯಕತೆ ಇಲ್ಲ’ ಎಂಬ ಸಿಎಂ ಹೇಳಿಕೆ

‘ನನಗೆ ಬಿಡದಿ ಯೋಜನೆಯ ಅವಶ್ಯಕತೆ ಇಲ್ಲ’ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅವಶ್ಯಕತೆ ಇಲ್ಲ ಎಂದಾದರೆ ಬಿಡದಿ ಟೌನ್‌ಶಿಪ್‌ ಯೋಜನೆಗೆ ಏಕೆ ಕೈ ಹಾಕಬೇಕು ಎಂದು ತಿರುಗೇಟು ನೀಡಿದರು. ಜೊತೆಗೆ, ನನ್ನನ್ನು ನೀವು ಅಣ್ಣನನ್ನಾಗಿ ಮಾಡಿಕೊಳ್ಳುವುದು ಬೇಡ ಎಂದು ಟಾಂಗ್‌ ನೀಡಿದರು.


ಈ ಹಿಂದೆ 5 ಟೌನ್‌ಶಿಪ್‌ ಮಾಡಲು ಯೋಜನೆ ಮಾಡಿದ್ದೇ ನಾನು. ಈ ಯೋಜನೆ ಮಾಡುವಾಗ ಬಿಡದಿ ಭಾಗದಲ್ಲಿ ಮೂರು ಬಾರಿ ಸಭೆ ಮಾಡಿದ್ದೇವು. ಎಸ್‌ಇಝಡ್‌ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಮ್ಮ ಸಿಎಸ್ ಗೆ ಪತ್ರ ಬರೆದಿತ್ತು. ಆದರೆ, ನನಗೆ ಮತ ಕೊಟ್ಟ ಜನರ ಮನಸ್ಸಿಗೆ‌ ನೋವು ಕೊಟ್ಟು, ಅವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಆವತ್ತೇ ನಾನು ತೀರ್ಮಾನ ಮಾಡಿದ್ದೆ ಎಂದರು.

ಯೋಜನೆಗೆ ಎರಡು ತಿಂಗಳು ಕಾಯ್ತಿವಿ ಅಂತಿರಿ. ಆದರೆ, ಬುಧವಾರ ಬೆಳಗ್ಗೆ ಮತ್ತೆ ನಾಲ್ಕು ಹಳ್ಳಿಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದೀರಿ ಎಂದರು.

ಇಂಡಸ್ಟ್ರೀಯಲ್ ಟೌನ್ ಗೆ ಕ್ಯಾತನಗಾನಹಳ್ಳಿ ಜಮೀನನ್ನು ಯಾಕೆ ಸೇರಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ, ಹಾರೋಹಳ್ಳಿಗೂ, ಕ್ಯಾತನಹಳ್ಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

‘ಬನ್ನಿ ನನಗೆ ಪೊರಕೆಯಲ್ಲಿ ಹೊಡಿಯಿರಿ’ ಅಂತಾರೆ, ಸಿಎಂ ಆಗಿ ಆಡುವ ಮಾತಾ ಇದು?. ಎಲ್ಲಿಗೆ ಬಂತು ಕರ್ನಾಟಕದ ಸ್ಥಿತಿ ಎಂದು ವಿಷಾದಿಸಿದರು. ಪದೇ ಪದೇ ಜೈಲಿಗೆ ಹೋಗಿದ್ದೀನಿ ಅಂತೀರಾ, ಅಷ್ಟಕ್ಕೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಇವರು ಜೈಲಿಗೆ ಹೋಗಿದ್ರಾ? ಎಂದು ಪ್ರಶ್ನಿಸಿದರು.

ಈ ಹಿಂದೆ 5 ಟೌನ್‌ಶಿಪ್‌ಗೆ ಯೋಜಿಸಿದ್ದಾಗ ಬಿಡದಿಯಲ್ಲಿ 3 ಸಲ ಸಭೆ ಮಾಡಿದ್ದೆ

ಎಸ್‌ಇಝಡ್‌ ಉದ್ದೇಶದಿಂದ ಕೇಂದ್ರ ಸರ್ಕಾರ ನಮ್ಮ ಸಿಎಸ್‌ಗೆ ಪತ್ರ ಬರೆದಿತ್ತು

ಆದರೆ, ಮತ ಹಾಕಿದವರ ಒಕ್ಕಲೆಬ್ಬಿಸುವುದಿಲ್ಲ ಎಂದು ನಾನು ತೀರ್ಮಾನಿಸಿದ್ದೆ

ಆದ್ರೆ ಇದೀಗ ಅಂತಿಮ ಅಧಿಸೂಚನೆಗೆ ಮುನ್ನ ರೈತರ ಅಭಿಪ್ರಾಯ ಸಂಗ್ರಹಿಸಿಲ್ಲ

2 ತಿಂಗಳು ಕಾಯ್ತಿವಿ ಅಂತಿರಿ. ಮತ್ತೆ ಭೂ ಸ್ವಾಧೀನಕ್ಕೆ ಆದೇಶ ಹೊರಡಿಸಿದ್ದೀರಿ

ಬನ್ನಿ ನನಗೆ ಪೊರಕೆಯಲ್ಲಿ ಹೊಡಿಯಿರಿ’ ಅಂತಾರೆ, ಸಿಎಂ ಆಡುವ ಮಾತಾ ಇದು?