ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬುಧವಾರ ದೆಹಲಿಗೆ ತೆರಳಿದ್ದು, ಗುರುವಾರ ರಾಹುಲ್‌ಗಾಂಧಿ ಅವರ ಅನುಪಸ್ಥಿತಿಯಲ್ಲಿ ಹಿರಿಯ ನಾಯಕರೊಂದಿಗೆ ಪೂರ್ವಭಾವಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಜು.20 ರಂದು ಸೋಮವಾರ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ.
ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲಾ ಅವರ ಜತೆಗೆ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ್ ಅವರ ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡುವ ಸಾಧ್ಯತೆಯಿದೆ.
ಸಂಪುಟ ವಿಸ್ತರಣೆ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಹಾಗೂ ಅರ್ಹರ ಹೆಸರನ್ನು ಪಡೆಯಲಿರುವ ಹೈಕಮಾಂಡ್ ಈ ಶಿಫಾರಸುಗಳ ಆಧಾರದ ಮೇಲೆ ಅಂತಿಮವಾಗಿ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ರಾಜ್ಯ ನಾಯಕತ್ವಕ್ಕೆ ರವಾನಿಸಲಿದ್ದು, ಈ ಪಟ್ಟಿಯಂತೆ ಸೋಮವಾರ ಅಥವಾ ಮಂಗಳವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಮೇ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಅವರ ಸಂಪುಟದಲ್ಲಿದ್ದ ಸಚಿವರನ್ನು ವಿಸರ್ಜಿಸಲಾಗಿತ್ತು. ಬಳಿಕ ಜೂ.3 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ 12 ಮಂದಿ ಸಚಿವರಾಗಿ ಪುನಃ ಪ್ರಮಾಣವಚನ ಸ್ವೀಕರಿಸಿದರು. 13ನೇಯವರಾಗಿ ಯತೀಂದ್ರ ಸಿದ್ದರಾಮಯ್ಯ ಹೊಸದಾಗಿ ಸೇರ್ಪಡೆಯಾಗಿದ್ದರು.
ಇದೀಗ ಸಂಪುಟ ವಿಸ್ತರಣೆ ವೇಳೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ 3-4 ಮಂದಿ ಹಿರಿಯರಿಗಷ್ಟೇ ಅವಕಾಶ ನೀಡಲಾಗುತ್ತದೆ. ಉಳಿದ ಎಲ್ಲಾ ಸ್ಥಾನಗಳನ್ನೂ ಹೊಸಬರಿಗೆ ನೀಡಲಾಗುತ್ತದೆ. ಸಂಪುಟ ಸ್ಥಾನದಲ್ಲಿ ಪುನಃ ಸ್ಥಾನ ಪಡೆಯುವವರ 3-4 ಮಂದಿ ಪೈಕಿ ಮಧುಬಂಗಾರಪ್ಪ ಮಾತ್ರ ಹೊಸಬರಾಗಿದ್ದು, ಉಳಿದೆಲ್ಲರೂ ಹಿರಿಯ ಸಚಿವರೇ ಆಗಿರಲಿದ್ದಾರೆ. ಅಂತಿಮವಾಗಿ ಯಾರು ಸಚಿವರಾಗಲಿದ್ದಾರೆ ಎಂಬುದು ವರಿಷ್ಠರೊಂದಿಗಿನ ಸಭೆಯ ಬಳಿಕವಷ್ಟೇ ತಿಳಿದುಬರಲಿದೆ.
ಇನ್ನು ಗುರುವಾರ ನಡೆಯಲಿರುವ ವರಿಷ್ಠರೊಂದಿಗಿನ ಸಭೆಯಲ್ಲೇ ನಿಗಮ-ಮಂಡಳಿ ಅಧ್ಯಕ್ಷರು, ಸದಸ್ಯರ ನೇಮಕದ ಬಗ್ಗೆಯೂ ಚರ್ಚೆಯಾಗಲಿದೆ. ಜತೆಗೆ ವಿಧಾನಪರಿಷತ್‌ನಲ್ಲಿ ಜು.21ಕ್ಕೆ ಖಾಲಿಯಾಗಲಿರುವ 5 ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸಂಪುಟ ಸಭೆ ಮುಂದೂಡಿಕೆ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ನಾಯಕರ ಬುಲಾವ್‌ನಿಂದಾಗಿ ಬುಧವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದು, ಗುರುವಾರ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ.
- ಸಚಿವ ಸಂಪುಟ ವಿಸ್ತರಣೆ ಚರ್ಚೆಗಾಗಿ ಬುಧವಾರ ಸಂಜೆಯೇ ಡಿಕೆಶಿ, ಸಿದ್ದು, ಹರಿಪ್ರಸಾದ್ ದೆಹಲಿಗೆ
- ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ಇಂದು ದೆಹಲಿಯಲ್ಲಿ ಖರ್ಗೆ, ವೇಣು, ಸುರ್ಜೇವಾಲಾ ಜತೆ ಸಭೆ
- ಈ ಸಭೆಯ ಬಳಿಕ ಡಿಕೆಶಿ, ಸಿದ್ದು ಅವರಿಂದ ಪ್ರತ್ಯೇಕ ಸಚಿವರ ಪಟ್ಟಿ ಹೈಕಮಾಂಡ್‌ಗೆ ಹಸ್ತಾಂತರ
- ರಾಜ್ಯ ನಾಯಕರ ಅಭಿಪ್ರಾಯ, ಅರ್ಹರ ಹೆಸರು ಪಡೆದು ಅಂತಿಮ ಪಟ್ಟಿ ವರಿಷ್ಠರಿಂದ ತಯಾರಿ
- ಸೋಮವಾರ ಅಥವಾ ಮಂಗಳವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆ
- ಸಂಪುಟ ವಿಸ್ತರಣೆ ವೇಳೆ 3-4 ಮಂದಿಯನ್ನು ಬಿಟ್ಟು ಹೊಸ ಮುಖಗಳಿಗೆ ಅವಕಾಶ ಸಿಗುವ ಸಂಭವ
