ಸೋಮರಡ್ಡಿ ಅಳವಂಡಿ ಕೊಪ್ಪಳ
ಬೋಚನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ, ಬಂಪರ್ ಫಲಿತಾಂಶ ಪಡೆದಿರುವ ಈಕೆ ತಮ್ಮೂರಿನ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿನ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಅಪ್ಪ ಅಂಗವಿಕಲ, ಆದರೂ ನಿತ್ಯವೂ ದುಡಿಯಲು ಕೂಲಿಗಾಗಿ ಹೋಗುತ್ತಿದ್ದರು. ತಾಯಿಯೂ ಕೂಲಿ ಮಾಡುತ್ತಿದ್ದಳು. ಆದರೂ ಮಗಳು ಓದಬೇಕು ಎನ್ನುವ ಆಸೆಯಿಂದ ತಮ್ಮೂರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದ್ದರು. ಮಗಳು ಸಂಗೀತಾ, ಅಪ್ಪ, ಅಮ್ಮನಿಗೂ ಹೊರೆಯಾಗಬಾರದು ಎಂದು ರಜೆ ಇದ್ದಾಗಲೆಲ್ಲ ಕೂಲಿ ಕೆಲಸ ಮಾಡುತ್ತಿದ್ದಳು.ಒಂದು ದಿನವೂ ಟ್ಯೂಶನ್ ಮುಖ ನೋಡಿಲ್ಲ. ಸರ್ಕಾರಿ ಪ್ರೌಢಶಾಲೆಗೆ ಹೋಗಿಯೇ ಇಷ್ಟೊಂದು ಉತ್ತಮ ಫಲಿತಾಂಶ ಮಾಡಿದ್ದಾಳೆ. ಮಗಳ ಸಾಧನೆಯಿಂದ ಅಪ್ಪ, ಅಮ್ಮ ಹಿರಿಹಿರಿ ಹಿಗ್ಗುವ ಪರಿಸ್ಥಿತಿಯಲ್ಲಿ ಇಲ್ಲ. ಕಾರಣ ಬಡತನ ಇರುವುದರಿಂದ ಮಗಳು ಮುಂದಿನ ಓದು ಹೇಗೆ ಎನ್ನುವುದೇ ದೊಡ್ಡ ಚಿಂತೆಯಾಗಿದೆ. ನಮ್ಮ ಮಗಳು ಊರಿಗೆ ಫಸ್ಟ್ ಬಂದಿದ್ದಾಳೆ ಅಂತೆ, ಆಕೆಯನ್ನು ಶಾಲೆ ಬಿಡಿಸಿ, ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಹೇಗಾದರೂ ಮಾಡಿ ಓದಿಸಬೇಕು ಎನ್ನುತ್ತಾರೆ ತಂದೆ ರಾಮಪ್ಪ.
ವಿದ್ಯಾರ್ಥಿ ಸಂಗೀತಾಳನ್ನು ಶಾಲೆಯ ಮುಖ್ಯೋಪಾಧ್ಯಾಯ ದೇವಪ್ಪ ಬಿ. ಅವರು ಹಾಡಿ ಹೊಗಳುತ್ತಾರೆ. ಮನೆಯಲ್ಲಿ ಕಡುಬಡತನ ಇದೆ. ಆದರೂ ಆ ಪ್ರತಿಭಾವಂತ ವಿದ್ಯಾರ್ಥಿಯನ್ನು ಏನಾದರೂ ಮಾಡಿ ಓದಿಸಬೇಕು ಎನ್ನುತ್ತಾರೆ. ಆಕೆಗೆ ಸಹಾಯ ಮಾಡುತ್ತಲೇ ಇಲ್ಲಿಯವರೆಗೂ ತಂದಿದ್ದೇವೆ, ಇನ್ಮುಂದೆಯೂ ಕೈಬಿಡುವುದಿಲ್ಲ ಎನ್ನುತ್ತಾರೆ. ಕೂಲಿ ಕೆಲಸ ಮಾಡುವ ತಂದೆ, ತಾಯಿಗಳ ಜತೆಯಲ್ಲಿ ರಜೆ ಇದ್ದಾಗಲೆಲ್ಲ ಕೂಲಿ ಮಾಡುತ್ತಲೇ ಇಷ್ಟು ಸಾಧನೆ ಮಾಡಿದ್ದಾಳೆ. ಆಕೆಯ ಪ್ರತಿಭೆಗೆ ಬಡತನ ಅಡ್ಡಿಯಾಗಬಾರದು ಎನ್ನುವುದು ನಮ್ಮ ಕಳಕಳಿ ಎನ್ನುತ್ತಾರೆ.
ಮಗಳು ಫಸ್ಟ್ ಏನೋ ಬಂದಿದ್ದಾಳೆ, ಮುಂದೆ ಹೇಗೆ ಓದಿಸುವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ. ಕೂಲಿ ಮಾಡುವ ನಮಗೆ ಮುಂದಿನ ಖರ್ಚು ನಿಭಾಯಿಸುವುದು ಕಷ್ಟ ಎಂದು ವಿದ್ಯಾರ್ಥಿನಿಯ ತಂದೆ ರಾಮಪ್ಪ ಹವಳಣ್ಣವರ ತಿಳಿಸಿದ್ದಾರೆ.