ರೈಲ್ವೆ ವಲಯದಲ್ಲಿ ಶೇ.೯೯ರಷ್ಟು ಎಲೆಕ್ಟ್ರಿಕಲ್ ಮಾರ್ಗ ಸಿದ್ಧ: ಸೋಮಣ್ಣ

KannadaprabhaNewsNetwork |  
Published : Feb 08, 2026, 02:45 AM IST
ಎಚ್‌07.2-ಡಿಎನ್‌ಡಿ1: ದಾಂಡೇಲಿ ಅಳ್ನಾವರ ಪ್ರಯಾಣಿಕ ರೈಲು ಮರುಚಾಲನೆ 2 ಚಿತ್ರ | Kannada Prabha

ಸಾರಾಂಶ

ಯೋಜನೆಗಳು ಜಾರಿಯಾಗಿ ಜನರಿಗೆ ತಲುಪಿದಾಗ ಆ ಯೋಜನೆ ಸಾರ್ಥಕತೆ ತಲುಪುತ್ತದೆ. ಪ್ರವಾಸೋದ್ಯಮ ಹೊಂದಿರುವ ದಾಂಡೇಲಿಗೆ ರೈಲು ಸಂಚಾರ ಅವಶ್ಯವಾಗಿದೆ.

ದಾಂಡೇಲಿ-ಅಳ್ನಾವರ ಪ್ರಯಾಣಿಕ ರೈಲಿಗೆ ಮರುಚಾಲನೆ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ

ಕನ್ನಡಪ್ರಭ ವಾರ್ತೆ ದಾಂಡೇಲಿ

ಯೋಜನೆಗಳು ಜಾರಿಯಾಗಿ ಜನರಿಗೆ ತಲುಪಿದಾಗ ಆ ಯೋಜನೆ ಸಾರ್ಥಕತೆ ತಲುಪುತ್ತದೆ. ಪ್ರವಾಸೋದ್ಯಮ ಹೊಂದಿರುವ ದಾಂಡೇಲಿಗೆ ರೈಲು ಸಂಚಾರ ಅವಶ್ಯವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಅಳ್ನಾವರ-ದಾಂಡೇಲಿ ಪ್ರಯಾಣಿಕರ ರೈಲು ಮರು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

೨೦೨೧ರ ಮಾರ್ಚ್‌ ತಿಂಗಳಲ್ಲಿ ಸ್ಥಗಿತಗೊಂಡಿದ್ದ ಪ್ರಯಾಣಿಕ ರೈಲು ಈಗ ಮರು ಚಾಲನೆಗೊಂಡಿದ್ದು, ಜನರ ಬಹುದಿನದ ಕನಸು ನನಸಾಗಿದೆ. ನಾವು ಎಷ್ಟು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ, ಆ ಕೆಲಸ ಜನರಿಗೆ ಎಷ್ಟು ಉಪಯೋವಾಗಿದೆ ಎನ್ನುವುದು ಮುಖ್ಯ. ದೇಶದ ಅಭಿವೃದ್ಧಿಗೆ ರೈಲ್ವೆ ಅಭಿವೃದ್ಧಿಯೂ ಕೂಡ ಪೂರಕವಾಗಿದೆ. ರೈಲ್ವೆ ಬಜೆಟ್‌ ಸಾಮಾನ್ಯ ಬಜೆಟ್‌ಗೆ ಸೇರ್ಪಡೆ ಮಾಡಿದ ನಂತರ ೩ ಲಕ್ಷ ಕೋಟಿ ಬಜೆಟ್‌ದಿಂದಾಗಿ ರೈಲ್ವೆ ಅಭಿವೃದ್ದಿಗೆ ವೇಗ ದೊರೆತಿದೆ ಎಂದರು.

ನಮ್ಮ ಸರಕಾರ ಬಂದನಂತರ ಈ ಅವಧಿಗೆ ₹೫೨ ಸಾವಿರ ಕೋಟಿ ವೆಚ್ಚದ ಕಾಮಗಾರಿ ಸೇರಿದಂತೆ ೩೮೪೦ ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ರೈಲ್ವೆ ವಲಯದಲ್ಲಿ ಶೇ.೯೯ರಷ್ಟು ಎಲೆಕ್ಟ್ರಿಕಲ್ ಮಾರ್ಗ ಸಿದ್ಧವಾಗಿದೆ. ರೈಲು ಅವಘಡ ತಡೆಯಲು ವಿಶೇಷ ಅಧುನಿಕ ಸಾಧನವನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ರೈಲು ಸಂಚಾರ ಪುನರಾರಂಭಗೊಂಡಿದ್ದು ಸಂತಸ ತಂದಿದೆ. ಪ್ರಮುಖ ನಗರಗಳಿಗೆ ಸಂಪರ್ಕ ಸಾಧಿಸಲು ಈ ರೈಲು ಮಾರ್ಗ ಆದ್ಯತೆ ನೀಡಬೇಕು. ಹುಬ್ಬಳ್ಳಿ, ಬೆಳಗಾವಿ, ಪಂಡರಪುರ, ಕೊಲ್ಲಾಪುರ, ಪುಣೆ, ಬೆಂಗಳೂರಿಗೂ ಸಂಪರ್ಕ ಕಲ್ಪಿಸುವಂತಾಗಬೇಕು ಆ ನಿಟ್ಟಿನಲ್ಲಿ ಅದಿಕಾರಿಗಳು ಕೆಲಸ ಮಾಡಬೇಕು. ಭಾನುವಾರ ದಾಂಡೇಲಿ ರೈಲು ಸಂಚಾರಕ್ಕೆ ಅವಕಾಶ ನೀಡಬೇಕು. ಅಧಿಕಾರ ಶಾಶ್ವತವಲ್ಲ, ಅಧಿಕಾರದಲ್ಲಿದ್ದಾಗ ಜನಮೆಚ್ಚುವ ಕೆಲಸ ಮಾಡಬೇಕು. ಸಂಸದ ಕಾಗೇರಿಯವರು ಹಳಿಯಾಳ ಕ್ಷೇತ್ರಕ್ಕೆ ಸಂಸದರ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ನಮ್ಮ ಭಾಗವು ಅಭಿವೃದ್ಧಿ ಹೊಂದುವಂತೆ ನಾನು ಕೆಲಸ ಮಾಡುತ್ತೇನೆ. ಈ ರೈಲು ಸಂಚಾರ ಪುನರಾರಂಭಗೊಳ್ಳಲು ಪ್ರಯತ್ನಿಸಿದ್ದು, ಮುಂದಿನ ದಿನಗಳಲ್ಲಿ ಇದು ಉತ್ತಮವಾಗಿ ಓಡುವಂತೆ ಮಾಡುವ ಕೆಲಸವನ್ನು ಸಚಿವ ವಿ.ಸೋಮಣ್ಣ ಅವರೊಂದಿಗೆ ಯೋಜನೆಯನ್ನು ಮಾಡುತ್ತೇವೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಸುನಿಲ ಹೆಗಡೆ, ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಹುಬ್ಬಳ್ಳಿಯ ರೈಲ್ವೆ ಪ್ರಭಂದಕಿ (ಡಿಆರ್‌ಎಂ) ಮೀನಾ, ರೈಲ್ವೆ ಅಧಿಕಾರಿ ಶಾಸ್ತ್ರಿ, ಕೊಂಕಣ ರೈಲ್ವೆ ಪ್ರಬಂಧಕಿ ಆಶಾ ಶೆಟ್ಟಿ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು