ಮನೆಯಲ್ಲಿ ಮತದಾನ ಮಾಡಿದ 103 ವರ್ಷದ ಅಜ್ಜಿ

KannadaprabhaNewsNetwork |  
Published : Apr 26, 2024, 12:51 AM IST
25ಕೆಪಿಎಲ್28 ಕೊಪ್ಪಳ ನಗರದಲ್ಲಿ  103 ವರ್ಷದ ರಾಧಾಬಾಯಿ ಮತದಾನ ಮಾಡಿದರು. | Kannada Prabha

ಸಾರಾಂಶ

ಶತಾಯಿಷಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಯುವ ಮತದಾರರಿಗೆ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಗುರುವಾರ ನಡೆದ ಮನೆಯಲ್ಲಿಯೇ ಮತದಾನದ ಮೂಲಕ ಶತಾಯಿಷಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಯುವ ಮತದಾರರಿಗೆ ಮಾದರಿಯಾಗಿದ್ದಾರೆ.

85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಅನುಕೂಲ ಕಲ್ಪಿಸಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 85+ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ಮತದಾರರ ಪೈಕಿ 12 ಡಿ ಮುಖಾಂತರ ಅರ್ಜಿ ಸಲ್ಲಿಸಿದ ಅರ್ಹ ಮತದಾರರಿಗೆ ಏ.25 ರಿಂದ ಏ.30 ರವರೆಗೆ ಮನೆಯಿಂದಲೇ ಮತದಾನ ನಡೆಯಲಿದೆ. ಈ ಹಿನ್ನೆಲೆ ಗುರುವಾರ ಸಂಬಂಧಪಟ್ಟ ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿ ಸಮಕ್ಷಮದಲ್ಲಿ ಹೋಮ್ ವೋಟಿಂಗ್ ಕಾರ್ಯ ನಡೆಯಿತು.

1952ರಿಂದ ಮತದಾನ ಹಕ್ಕು ಚಲಾಯಿಸುತ್ತಿರುವ ಕೊಪ್ಪಳದ ನಗರದ ಬನ್ನಿಕಟ್ಟಿ ಏರಿಯಾದ ನಿವಾಸಿ 103 ವರ್ಷ ವಯೋಮಾನದ ರಾಧಾಬಾಯಿ ಗಡಚಿಂತಿ ತುಂಬಾ ಉತ್ಸಾಹದಿಂದ ಮತಚಲಾಯಿಸಿದರು. ಆರೋಗ್ಯ ಸಮಸ್ಯೆ ಹಿನ್ನೆಲೆ ಆಕ್ಸಿಜನ್ ಹಾಕಿಕೊಂಡು ಮತದಾನದಿಂದ ಹೊರಗುಳಿಯದೇ ವೋಟ್ ಮಾಡಿರುವುದು ಮತ್ತೊಂದು ವಿಶೇಷವಾಗಿತ್ತು. ನಮ್ಮ ಮತ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡಬೇಕು ಎಂದು ರಾಧಾಬಾಯಿ ಹೇಳಿದರು.

ಶತಾಯುಷಿ ಮತದಾರರ ಉತ್ಸಾಹಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ:

ಹೋಮ್ ವೋಟಿಂಗ್ ಮೂಲಕ ನಡೆದ ಮತದಾನ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿ, ಕೊಪ್ಪಳ ನಗರದ ಶತಾಯುಷಿಗಳಾದ ರಾಧಾಬಾಯಿ ಗಡಚಿಂತಿ, ಕಲಾವತಿ ಹಾಗೂ ಮಾಬಮ್ಮ ಅವರ ಮತದಾನದ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಕ್ಕು ಚಲಾಯಿಸಿದ ಮತದಾರರು: ಗುರುವಾರದಂದು 85 ವರ್ಷ ದಾಟಿದ ಮತದಾರರಾದ ಗಿರಿಜಮ್ಮ, ಜೈನಾಬಿ, ಹುಸೇನ್ ಬಿ, ಮೋದಿನಬೀ, ಕರಕವ್ವ, ಪ್ರಹ್ಲಾದ ಆಚಾರ್, ಸುಶಿಲೇಂದ್ರ ಆಚಾರ್, ಧಿರೇಂದ್ರ ಆಚಾರ್, ಲಲಿತಾಬಾಯಿ, ಪದ್ಮಾವತಿ, ಸೀತಾಬಾಯಿ, ರಾಜುಬಾಯಿ, ಹನುಮಮ್ಮ, ನಾರಾಯಣರಾವ್ ಸೇರಿದಂತೆ ಮತ್ತಿತರರು ಮತದಾನದ ಹಕ್ಕು ಚಲಾಯಿಸಿದರು.

ಮನೆಯಿಂದಲೇ ಮತದಾನ ಮಾಡಿದ ಅಂಗವಿಕಲರು:

ಹೋಮ್ ವೋಟಿಂಗ್ ಮೂಲಕ ಅಂಗವಿಕಲರು ಮತದಾರರಾದ ಅಮೃತ್, ರಾಧಾಬಾಯಿ, ಗೌಸಿಯಾ ಬೇಗಂ, ಅಶ್ವಿನಿ, ಪುರುಷೋತ್ತಮ್ಮ ಸೇರಿದಂತೆ ಇತರರು ತಮ್ಮ ಹಕ್ಕನ್ನು ಚಲಾಯಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ತಹಸೀಲ್ದಾರ ವೀಠ್ಠಲ್ ಚೌಗಲಾ, ಸೆಕ್ಟರ್ ಅಧಿಕಾರಿ ವಿದ್ಯಾಧರ, ಪೊಲಿಂಗ್ ಅಧಿಕಾರಿ ಮಲ್ಲಪ್ಪ ಹಾಗೂ ಮರ್ದಾನ, ಬಿ.ಎಲ್.ಓ ಸುಜಾತಾ ಪಾಟೀಲ್ ಹಾಗೂ ರಾಮಣ್ಣ, ಜಿಲ್ಲಾ ಸ್ವೀಪ್ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮತ್ತು ವೆಂಕೋಬ, ನಗರಸಭೆ ಸಿಬ್ಬಂದಿ ಸೇರಿದಂತೆ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ