ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ತಾಲೂಕಿನ ಸೂಡಿ ವಲಯದ ಗ್ರಾಪಂ ಮಟ್ಟದ ಪೋಷಣ್ ಅಭಿಯಾನ ಕಾರ್ಯಕ್ರಮವು ಗ್ರಾಮದ ೨೫೩ನೇ ಕೇಂದ್ರದಲ್ಲಿ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಅಳವಂಡಿ ಮಾತನಾಡಿ, ದೇಹದ ಆರೋಗ್ಯಕ್ಕೆ ಸಮತೋಲಿತ ಆಹಾರ ಅಗತ್ಯವಾಗಿದೆ. ಆಹಾರದ ಕೊರತೆ ಮಾತ್ರವಲ್ಲದೆ ಅತಿಯಾದ ಪೌಷ್ಟಿಕಾಂಶವು ದೇಹಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಹಾಗಾಗಿ ಅತೀಪೌಷ್ಟಿಕ, ಅಪೌಷ್ಟಿಕ ಆಹಾರಗಳೆರಡು ದೇಹಕ್ಕೆ ಅಪಾಯಕಾರಿಯಾಗಿದೆ ಎಂದ ಅವರು, ಆರೋಗ್ಯವಾಗಿರಲು ಪೌಷ್ಟಿಕಾಂಶವುಳ್ಳ ಆಹಾರ, ಹಿತ,ಮಿತವಾದ ಮತ್ತು ಸಮತೋಲಿತ ಆಹಾರ ಅತ್ಯಗತ್ಯ. ದಿನ ನಿತ್ಯದ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್,ಕೊಬ್ಬು, ವಿಟಮಿನ್ ಮತ್ತು ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕೆಂದು ಎಂದ ಅವರು, ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕ. ಹೀಗಾಗಿ ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗ ಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕು ಎಂದರು.ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಿರಿಜಾ ದೊಡ್ಡಮನಿ, ಸೂಡಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜ್ ಬಿದೂರ್ ಹಾಗೂ ಗ್ರಾಪಂ ಮಾಜಿ ಸದಸ್ಯೆ ಹುಲಿಗೆಮ್ಮ ದೊಡ್ಡಮನಿ ಮಾತನಾಡಿದರು.ಈ ವೇಳೆ ಪ್ರಾಥಮಿಕ ಅರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ ಕುಬಸದ, ಗ್ರಾಪಂ ಕಾರ್ಯದರ್ಶಿ ಮುಕ್ತಬಾಯಿ ಜಾಧವ, ಮಿಷನ್ ಶಕ್ತಿ ಜಿಲ್ಲಾ ಸಂಯೋಜಕಿ ರಾಜೇಶ್ವರಿ ಉಪ್ಪಿನ, ಪೋಷಣ್ ಅಭಿಯಾನ ಯೋಜನೆ ಜಿಲ್ಲಾ ಸಂಯೋಜಕಿ ಸಂಗೀತಾ ಹೂಗಾರ, ಮಹೇಶ್ ಹಿರೇಮಠ, ದಿಲ್‌ಶಾದ್ ಮುಲ್ಲಾ ಸೇರಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಹಾಗೂ ಊರಿನ ಎಲ್ಲಾ ಹಿರಿಯರು ನಾಗರಿಕರು, ಗರ್ಭಿಣಿಯರು, ಬಾಣಂತಿಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಇದ್ದರು.