ಆಸ್ತಿಗಾಗಿ ಸಂಬಂಧಿಕರಿಂದಲೇ ನಡೆಯಿತು ಬರ್ಬರ ಕೊಲೆ!

KannadaprabhaNewsNetwork | Published : Dec 5, 2023 1:30 AM

ಸಾರಾಂಶ

ಆ ವ್ಯಕ್ತಿಯ ಬಳಿ ಸಾಕಷ್ಟು ಆಸ್ತಿ ಇತ್ತು. ನೆಮ್ಮದಿಯಿಂದ ಬದುಕಲು ಸಾಕಷ್ಟು ಹಣವೂ ಇತ್ತು. ಆದರೆ, ಆತ ಜೀವನ ಅನುಭವಿಸುವುದಕ್ಕಿಂತ ಹೆಚ್ಚು ಕೂಡಿ ಇಡುವುದರಲ್ಲಿಯೇ ಕಳೆದುಬಿಟ್ಟ. ಹಣ, ಆಸ್ತಿ-ಪಾಸ್ತಿ ಇದ್ದರೂ ತಮ್ಮವರಿಗಾಗಲೀ ಅಥವಾ ಸಮಾಜಕ್ಕಾಗಲೀ ಒಂದು ಪೈಸೆಯನ್ನೂ ಕೊಡಲಿಲ್ಲ. ದುರದೃಷ್ಟವಶಾತ್‌ ಅದೇ ಆಸ್ತಿಗಾಗಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಅದೂ ತನ್ನ ರಕ್ತ ಸಂಬಂಧಿಗಳಿಂದ!

ಕನ್ನಡಪ್ರಭ ವಾರ್ತೆ ಧಾರವಾಡ

ಆ ವ್ಯಕ್ತಿಯ ಬಳಿ ಸಾಕಷ್ಟು ಆಸ್ತಿ ಇತ್ತು. ನೆಮ್ಮದಿಯಿಂದ ಬದುಕಲು ಸಾಕಷ್ಟು ಹಣವೂ ಇತ್ತು. ಆದರೆ, ಆತ ಜೀವನ ಅನುಭವಿಸುವುದಕ್ಕಿಂತ ಹೆಚ್ಚು ಕೂಡಿ ಇಡುವುದರಲ್ಲಿಯೇ ಕಳೆದುಬಿಟ್ಟ. ಹಣ, ಆಸ್ತಿ-ಪಾಸ್ತಿ ಇದ್ದರೂ ತಮ್ಮವರಿಗಾಗಲೀ ಅಥವಾ ಸಮಾಜಕ್ಕಾಗಲೀ ಒಂದು ಪೈಸೆಯನ್ನೂ ಕೊಡಲಿಲ್ಲ. ದುರದೃಷ್ಟವಶಾತ್‌ ಅದೇ ಆಸ್ತಿಗಾಗಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಅದೂ ತನ್ನ ರಕ್ತ ಸಂಬಂಧಿಗಳಿಂದ!

ಭಾನುವಾರ ಮಬ್ಬುಕತ್ತಲಿನಲ್ಲಿ ಮರಾಠಾ ಕಾಲನಿ ರಸ್ತೆಯಲ್ಲಿ ಬರ್ಬರ ಹತ್ಯೆಯೊಂದು ನಡೆಯಿತು. ಓರ್ವ ವೃದ್ಧನಿಗೆ ನಾಲ್ಕೈದು ಜನರು ಮಚ್ಚಿನಿಂದ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದರು.

ಮೂಲತಃ ಹೆಬ್ಬಳ್ಳಿಯ, ಧಾರವಾಡ ಮರಾಠಾ ಕಾಲನಿ ನಿವಾಸಿ ನಿಂಗಪ್ಪ ಹಡಪದ (65) ಅನಾಥ ಶವವಾಗಿ ಬಿದ್ದಿದ್ದರು.

ಈ ಘಟನೆ ನೋಡಿದ ಕೆಲವರು ಮೊಬೈಲ್‌ನಲ್ಲಿ ಕೊಲೆಯ ದೃಶ್ಯವನ್ನು ಸಹ ಸೆರೆ ಹಿಡಿದಿದ್ದರು. ಕೊಲೆಯಾದ ವ್ಯಕ್ತಿ ಯಾರೆಂದು ಗೊತ್ತಾದರೂ ಕೊಲೆ ಮಾಡಿದವರು ಯಾರೆಂದು ತಕ್ಷಣಕ್ಕೆ ಗೊತ್ತಾಗಿರಲಿಲ್ಲ.

ಸಂಬಂಧಿಕರಿಂದಲೇ ಕೊಲೆ:

ಸ್ವತಃ ನಿಂಗಪ್ಪನ ತಮ್ಮ ಕಲ್ಲಪ್ಪ ಹಾಗೂ ಆತನ ಮೂವರು ಮಕ್ಕಳು ಕೊಲೆ ಮಾಡಿದವರು. ಇದಕ್ಕೆ ಕಾರಣ ಆಸ್ತಿ. ನಿಂಗಪ್ಪನಿಗೆ ಅವರ ಹಿರಿಯರಿಂದ 34 ಎಕರೆ ಭೂಮಿ ಬಂದಿತ್ತು. ಆದರೆ, ನಿಂಗಪ್ಪನಿಗೆ ಮದುವೆಯಾಗಿರಲಿಲ್ಲ. ಅಲ್ಲದೇ ನಿಂಗಪ್ಪ ಸರ್ಕಾರಿ ನೌಕರಿ ಮಾಡಿದ್ದರಿಂದ ಪಿಂಚಣಿ ಕೂಡಾ ಬರುತ್ತಿತ್ತು. ಕುಟುಂಬದ ಯಾವುದೇ ಜಂಜಾಟ ಇರದೇ ಧಾರವಾಡದಲ್ಲಿ ಮನೆ ಮಾಡಿ ತನ್ನಷ್ಟಕ್ಕೆ ತಾನಿದ್ದ. ಸಹೋದರ ಕಲ್ಲಪ್ಪನಿಗೆ ಮೂವರು ಗಂಡು ಮಕ್ಕಳು. ಇಷ್ಟೊಂದು ಆಸ್ತಿ ಇಟ್ಟುಕೊಳ್ಳೋದಕ್ಕಿಂತ ಮೂವರಲ್ಲಿ ಓರ್ವನನ್ನು ದತ್ತು ಪಡೆದು, ಆತನಿಗೆ ಒಂದಷ್ಟು ಆಸ್ತಿ ಕೊಡು ಎನ್ನುವುದು ಕಲ್ಲಪ್ಪನ ವಾದವಾಗಿತ್ತು. ಆದರೆ, ತನ್ನವರೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧ ಹೊಂದಿರದ ನಿಂಗಪ್ಪ ಎಂಟು ಎಕರೆ ಹೊಲವನ್ನು ಮಾರಲು ನಿರ್ಧರಿಸಿದ್ದ. ಅಲ್ಲದೆ ತಾನು ಸಾಯುವ ವರೆಗೂ ತನ್ನ ಹೆಸರಿನಲ್ಲಿರುವ ಒಂದಿಂಚು ಭೂಮಿಯನ್ನು ಯಾರಿಗೂ ಕೊಡುವುದಿಲ್ಲ ಎಂದೂ ಸವಾಲು ಹಾಕಿದ್ದನು.

ಅಂತ್ಯಸಂಸ್ಕಾರಕ್ಕೂ ಯಾರೂ ಇಲ್ಲ:

ಹಾಗೆಯೇ ಬಿಟ್ಟರೆ ಎಲ್ಲ ಭೂಮಿ ಮಾರಾಟ ಮಾಡುತ್ತಾನೆ ಅಂದುಕೊಂಡ ಕಲ್ಲಪ್ಪ ಹಾಗೂ ಆತನ ಮಕ್ಕಳಾದ ಮಲ್ಲಿಕಾರ್ಜುನ, ಶ್ರೀಕಾಂತ್, ಕಿರಣ ಹಾಗೂ ಅಳಿಯ ಅಶೋಕ ಸೇರಿಕೊಂಡು ನಿಂಗಪ್ಪನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ.

ದುರಂತದ ಸಂಗತಿ ಎಂದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಡಲು ನಿಂಗಪ್ಪನ ಪರ ಯಾರೂ ಇರಲಿಲ್ಲ. ಹೀಗಾಗಿ ಪೊಲೀಸರೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅಂತ್ಯಸಂಸ್ಕಾರ ಕೂಡ ಮಾಡುವರೂ ಯಾರೂ ಇಲ್ಲದೇ ಪೊಲೀಸರೇ ಅದನ್ನೂ ಮುಗಿಸಿದ್ದಾರೆ.

ನಿಂಗಪ್ಪನ ಸಮಾಜದವರಿಗೆ ಫೋನ್ ಮಾಡಿ ಪೊಲೀಸರು ಮನವಿ ಮಾಡಿಕೊಂಡರೂ ನಿಂಗಪ್ಪ ಸಮಾಜಕ್ಕೂ ಏನೂ ಮಾಡಿಲ್ಲ. ಆತನ ಉಸಾಬರಿ ನಮಗೇಕೆ ಎಂದು ಸಮಾಜದವರೇ ದೂರ ಸರಿದಿದ್ದಾರೆ.

ಈ ಮೊದಲು ಸಮಾಜದ ಹಿರಿಯರೆಲ್ಲ ಸೇರಿ ಸಾಕಷ್ಟು ಬಾರಿ ನಿಂಗಪ್ಪನಿಗೆ ತಿಳಿ ಹೇಳಿದ್ದರು. ಆದರೆ, ಹಿರಿಯರ ಮಾತಿಗೆ ನಿಂಗಪ್ಪ ಕಿವಿ ಒಡ್ಡಲಿಲ್ಲ. ಕೊನೆಗೆ ಆಸ್ತಿಗಾಗಿ ತನ್ನ ರಕ್ತ ಸಂಬಂಧಿಗಳಿಂದಲೇ ನಿಂಗಪ್ಪ ಹತನಾಗಿದ್ದಾನೆ. ಇದೀಗ ಉಪನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

Share this article