ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಕಳೆದ 15 ದಿನಗಳಿಂದ ಅಗಸನಹಳ್ಳಿ ಹಾಗೂ ಎಮ್ಮೆಹಟ್ಟಿ ಗ್ರಾಮದವರ ನಿದ್ದೆಗೆಡಿಸುತ್ತಿದ್ದ ಕರಡಿಯೊಂದು ಶನಿವಾರ ತಡರಾತ್ರಿ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.ಸಮೀಪದ ತಟ್ಟೆಹಳ್ಳಿಯ ಚೌಡೇಶ್ವರಿ ದೇವಸ್ಥಾನ ಬಳಿ ಇರಿಸಿದ್ದ ಬೋನಿಗೆ ಬಿದ್ದಿದೆ. ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕರಡಿಯಿಂದಾಗಿ ರೈತರು, ಕೂಲಿ ಕಾರ್ಮಿಕರು, ಮನೆಯಿಂದ ಹೊರಗಡೆ ಬರುವುದಕ್ಕೂ ಜನರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಭಾಗರದಲ್ಲಿ ಎರಡು ಕರಡಿಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಶನಿವಾರ ರಾತ್ರಿ ಒಂದು ಕರಡಿ ಸಿಕ್ಕಿದ್ದರಿಂದ ಅರ್ಧ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ವಾರದಿಂದ ಮೂರು ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟು ಕಾಯುತ್ತಿದ್ದರು. ಹಲವಾರು ಬಾರಿ ಬೋನಿನ ಸಮೀಪ ಬಂದರೂ ಕೂಡ ಪಾರಾಗುತ್ತಿದ್ದ ಕರಡಿ ಶನಿವಾರ ತಡರಾತ್ರಿ ಬೋನಿನೊಳಗೆ ಬಿದ್ದಿದೆ. ಕರಡಿ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಜನ ಸಾಗರೋಪಾಧಿಯಲ್ಲಿ ಕರಡಿ ನೋಡಲು ಆಗಮಿಸಿದ್ದರು.ಅಗಸನಹಳ್ಳಿ ಹಾಗೂ ಎಮ್ಮೆಹಟ್ಟಿ ಗ್ರಾಮದಲ್ಲಿ ಹೆಚ್ಚು ಕಾಣಿಸಿಕೊಳ್ಳತ್ತಿದ್ದ ಕರಡಿ. ಇತ್ತೀಚೆಗೆ ಜನರು ಜಮೀನುಗಳಿಗೆ ಹೋಗುವುದಕ್ಕೆ ಹಾಗೂ ಅಡಕೆ ಮನೆಗಳಿಗೂ ಹೋಗುವುದಕ್ಕೂ ಹಿಂದೇಟು ಹಾಕುತ್ತಿದ್ದರೂ. ಲಕ್ಷಾಂತರ ರು. ಖರ್ಚು ಮಾಡಿ ಅಡಕೆ ಗೇಣಿ ಮಾಡುತ್ತಿದ್ದ ರೈತರು ಗ್ರಾಮದ ಹೊರ ವಲಯದ ಅಡಕೆ ಮನೆಯಲ್ಲಿ ನಿದ್ರಿಸಲು ಹಿಂದೇಟು ಹಾಕುತ್ತಿದ್ದರು.
ಮತ್ತೊಂದು ಕರಡಿ ಪರಾರಿ:ರಾತ್ರಿ ಸುಮಾರು 10 ಗಂಟೆಗೆ ಅಗಸನಹಳ್ಳಿ ಗ್ರಾಮದ ಮನೆಯೊಂದರ ಸಮೀಪ ಕಾಣಿಸಿಕೊಂಡ ಇನ್ನೊಂದು ಕರಡಿ, ಮನೆಯ ಪಕ್ಕದಲ್ಲಿರು ಬಾಳೆ ಗಿಡದ ಬಳಿ ಹೋಗಿ ಮಲಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಎರಡು ಜೀಪಿನಲ್ಲಿ ಆಗಮಿಸಿದರು.
ಕರಡಿ ಮಲಗಿದ್ದ ಸ್ಥಳದಿಂದ ಏಳದೇ ಇದ್ದಾಗ ಅರಣ್ಯ ಇಲಾಖೆಯವರೊಂದಿಗೆ ಕೈ ಜೋಡಿದ ಅಗಸನಹಳ್ಳಿ ಹಾಗೂ ಎಮ್ಮೆಹಟ್ಟಿ ಗ್ರಾಮಸ್ಥರು ಬಲೆಯ ಸುತ್ತವರೆದು ಕಾರ್ಯಚರಣೆ ಮುಂದಾದರು. ಈ ವೇಳೆ ಎಚ್ಚೆತ್ತ ಕರಡಿ ಸುತ್ತು ವರೆದಿದ್ದ ಜನರ ಮೇಲೆ ದಾಳಿಗೆ ಯತ್ನಿಸಿದಾಗ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಕರಡಿ ಅಲ್ಲಿಂದ ತಪ್ಪಿಸಿಕೊಂಡಿತ್ತು. ರಾತ್ರಿ ಸುಮಾರು 2 ಗಂಟೆಯ ವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿದರೂ ಕರಡಿ ಕೈಗೆ ಸಿಕ್ಕಿದೆ ಪರಾರಿಯಾಗಿದೆ.ಕಾರ್ಯಾಚರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಕರಡಿಯನ್ನು ಜನರು ಹಿಂಬಾಲಿಸದೇ ಇದ್ದಿದ್ದರೇ ಇನ್ನೂ ಎರಡ್ನೂರು ದಿನಗಳ ಮುಂಚೆಯೇ ಕಾರ್ಯಾಚರಣೆ ಮುಗಿಯುತ್ತಿತ್ತು. ಹಿಡಿದ ಕರಡಿ ಅರಣ್ಯಕ್ಕೆ ಬಿಡಲಾಗಿದೆ. ಇನ್ನೊಂದು ಕರಡಿಗೂ ಗ್ರಾಮಸ್ಥರು ಯಾವುದೇ ತೊಂದರೆ ಕೊಡದೇ ಇದ್ದರೇ ಆದಷ್ಟು ಬೇಗ ಅದನ್ನು ಕೂಡ ಬಂಧಿಸುವಲ್ಲಿ ಯಶಸ್ವಿಯಾಗುತ್ತೇವೆ. ಕರಡಿಗೆ ಕೂದಲು ಹೆಚ್ಚಾಗಿರುವುದರಿಂದ ಅರವಳಿಕೆ ಮದ್ದು ನೀಡಲು ಬರುವುದಿಲ್ಲ. ಜನರು ಹೆದರುವ ಅವಶ್ಯಕತೆ ಇಲ್ಲ. ಅರಣ್ಯ ಇಲಾಖೆ ಜನರೊಂದಿಗೆ ಸದಾ ಇರುತ್ತದೆ,
ಜಗದೀಶ್, ಆರ್‌ಎಫ್ಒ