ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರತಿಭಾ ಪುರಸ್ಕಾರ, ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೊಡ್ಡ ಮಾಧ್ಯಮ ಸಂಸ್ಥೆಗಳು ಕೆಲವೇ ಪ್ರಭಾವಿ ವ್ಯಕ್ತಿಗಳ ಕೈಗೆ ಸೇರುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದರಿಂದ ಸತ್ಯವನ್ನು ನಿರ್ಭೀತಿಯಾಗಿ ಪ್ರಕಟಿಸುವುದು ಕಷ್ಟವಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ದಿನಗಳಲ್ಲಿ ಲಂಕೇಶ್ ಪತ್ರಿಕೆ ಹಾಗೂ ಹಿರಿಯ ಪತ್ರಕರ್ತ ಕಿಡಿ ಶೇಷಣ್ಣ ಅವರಂತಹವರು ನಿರ್ಭೀತಿಯಿಂದ ಸತ್ಯವನ್ನು ಬರೆದಾಗ ಸರ್ಕಾರ ಹಾಗೂ ಅಧಿಕಾರಿಗಳೇ ಎಚ್ಚರಿಕೆಯಿಂದ ಇರುತ್ತಿದ್ದರು. ಆದರೆ ಇಂದಿನ ಪತ್ರಿಕೋದ್ಯಮದಲ್ಲಿ ಆ ಮೌಲ್ಯಗಳು ಕ್ಷೀಣಿಸುತ್ತಿದ್ದು, ಪತ್ರಿಕಾ ಧರ್ಮ ಹಾಗೂ ನಿಷ್ಪಕ್ಷಪಾತತೆ ಉಳಿಯಬೇಕಾದ ಅಗತ್ಯವಿದೆ ಎಂದು ಎಚ್.ಎಂ.ರೇವಣ್ಣ ತಿಳಿಸಿದರು.
ಪತ್ರಿಕೋದ್ಯಮದಲ್ಲಿ ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ ಹಾಗೂ ಚಿಂತನಾತ್ಮಕ ಲೇಖನಗಳು ಎಂಬ ಮೂರು ಪ್ರಮುಖ ಅಂಶಗಳಿದ್ದು, ಅವು ಜನರಲ್ಲಿ ಸರಿಯಾದ ಅರಿವು ಮೂಡಿಸುವ ರೀತಿಯಲ್ಲಿ ಇರಬೇಕು. ವೈಯಕ್ತಿಕ ಅಥವಾ ರಾಜಕೀಯ ಒಲವುಗಳ ಆಧಾರದ ಮೇಲೆ ವಿಶ್ಲೇಷಣೆ ನಡೆಯಬಾರದು, ರಾಜಕೀಯ ಕ್ಷೇತ್ರದಲ್ಲಿಯೂ ಮೌಲ್ಯಗಳು ಕುಸಿಯುತ್ತಿವೆ. ಹಿಂದೆ ಜನಸೇವೆಯ ಉದ್ದೇಶದಿಂದ ನಾಯಕರು ರಾಜಕೀಯಕ್ಕೆ ಬರುತ್ತಿದ್ದರು. ಆದರೆ ಇಂದು ಅಧಿಕಾರವೇ ಮುಖ್ಯವಾಗುತ್ತಿರುವುದು ವಿಷಾದನೀಯ. ಅಧಿಕಾರ ಇದ್ದರೂ ಇಲ್ಲದಿದ್ದರೂ ಜನಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ನ್ಯಾಯಾಂಗದಲ್ಲಿ ತ್ವರಿತ ನ್ಯಾಯ ದೊರೆಯುವುದು ಅತ್ಯಂತ ಮುಖ್ಯ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ನೈತಿಕತೆ ಮತ್ತು ಪ್ರಾಮಾಣಿಕತೆ ಉಳಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ಯಾವುದೇ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಸಂಘಟನೆಗಳು ಬಲಿಷ್ಠವಾಗಿರಬೇಕು. ಅದೇ ರೀತಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಸದಸ್ಯರ ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಸದಾ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ನಿರ್ಭಯವಾಗಿ ಜನರ ಮುಂದೆ ತರುವ ಮೂಲಕ ಸರ್ಕಾರವನ್ನು ಸರಿದಾರಿಯಲ್ಲಿ ನಡೆಸುವ ಶಕ್ತಿ ಹೊಂದಿದ್ದಾರೆ. ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಮಾಧ್ಯಮವು ಸಂವಿಧಾನದ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಪತ್ರಕರ್ತರ ಮಕ್ಕಳಾದ ತೇಜಸ್ವಿನಿ ಗಿರೀಶ್, ರಂಗ ಕಲಾವಿದರಾದ ಶಿವಣ್ಣ, ರೈತ ಸಂಘದಲ್ಲಿ ಸೇವೆ ಸಲ್ಲಿಸಿದ ಶಿವಲಿಂಗಯ್ಯರನ್ನು ಸಂಘದ ವತಿಯದ ಸನ್ಮಾನಿಸಲಾಯಿತು,
ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.