ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದಿಂದ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ನೆನಪಿನಲ್ಲಿ ನಡೆದ ಮುದ್ರಣಕಾರರ ದಿನ ಮತ್ತು ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ದುಡಿಯುವ ಶ್ರಮ ಜೀವಿಗಳ ಮೇಲೆ ದೊಡ್ಡ ಪೆಟ್ಟು ಬಿದ್ದು ಶ್ರಮ, ಗಳಿಕೆ, ಸಂಪನ್ಮೂಲ ಕಸಿಯುವ ಕೆಲಸವಾಗುತ್ತಿದೆ ಎಂದು ಎಚ್ಚರಿಸಿದರು.
ಭಾರತದಲ್ಲಿ ಶೇ.80ರಷ್ಟು ಭಾಗ ಕಾರ್ಮಿಕರೇ ಆಗಿದ್ದಾರೆ. ಶೇ.20ರಷ್ಟು ಮಾತ್ರ ಶ್ರಮ ಎಂದರೆ ಏನೆಂದು ಗೊತ್ತಿಲ್ಲದವರಿರಬಹುದು. ರಾಷ್ಟ್ರದಲ್ಲಿ ಕೃಷಿಯನ್ನೇ ಅವಲಂಭನೆ ಮಾಡಿರುವವರೇ ಹೆಚ್ಚು. 90ರ ದಶಕದಲ್ಲಿ ಇಂತಹ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕೃಷಿಕರು, ಶ್ರಮಿಕರು, ಮಹಿಳೆಯರು, ಕಾರ್ಮಿಕರು, ದುಡಿಯುವ ಎಲ್ಲ ವರ್ಗದ ಜನತೆ ಈ ದೇಶವನ್ನು ಕಟ್ಟಿ ಉಳಿಸಿದ್ದೇವೆ. ಉಸಿರನ್ನೂ ಕೊಟ್ಟಿದ್ದೇವೆ. ಈ ದೇಶದ ಎಲ್ಲ ಗೌರವ, ಸಂಪನ್ಮೂಲ ಶ್ರಮಿಕರಿಗೆ, ಕಾರ್ಮಿಕರಿಗೆ ಬೆವರನ್ನು ಸುರಿಸಿ ದುಡಿಯುವವರಿಗೆ ಸಲ್ಲಬೇಕು. ಆದರೆ, ಶೇ.20ರಷ್ಟು ಜನರಿಗೆ ಇಡೀ ದೇಶವನ್ನು ಬಲಿಕೊಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಮನುಷ್ಯ ಜೀವಂತವಿರುವಾಗ ಏನಾದರೊಂದು ಸಾಧನೆ ಮಾಡಬೇಕು. ಇಲ್ಲದಿದ್ದರೆ ಅವನ ಹೆಸರು ಅಳಿಸಿಹೋಗುತ್ತದೆ. ಆದರೆ, ಮುದ್ರಣ ಮಾಧ್ಯಮವೊಂದನ್ನು ಜಗತ್ತಿಗೆ ಪರಿಚಯಿಸಿದ ಜೋಹಾನ್ಸ್ ಗುಟೆನ್ ಬರ್ಗ್ ಅವರನ್ನು ಜಗತ್ತು ಎಲ್ಲಿಯವರೆ ಇರುತ್ತದೋ ಅಲ್ಲಿಯವರೆವಿಗೂ ನೆನಪಿಸಿಕೊಳ್ಳುವಂತಹ ಕಾರ್‍ಯ ಮಾಡಿದ್ದಾರೆ ಎಂದು ಬಣ್ಣಿಸಿದರು.
ಇಂದು ವಿಶ್ವದೆಲ್ಲಡೆ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಖಾನೆಗಳಲ್ಲಿ ನಾಮಫಲಕಗಳನ್ನು ಹಾಕಿಕೊಂಡು ಕೆಲಸ ಮಾಡುವರಷ್ಟೇ ಕಾರ್ಮಿಕರಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೆ. ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪೌರ ಕಾರ್ಮಿಕರು ಕಾರಿನಲ್ಲಿ ಬಂದು ಅವರಿಗೆ ವಹಿಸಿದ ಕೆಲಸವನ್ನು ನಿಗಧಿತ ಅವಧಿಯೊಳಗೆ ಮುಗಿಸಿ ವಾಪಸ್ಸಾಗುತ್ತಾರೆ. ಆದರೆ, ನಮ್ಮಲ್ಲಿ ಇನ್ನೂ ಅಂತಹ ಸ್ಥಿತಿ ಕಂಡಿಲ್ಲ. ದುಡಿಮೆಗೆ ಹಣ ಕೊಡುವವನೇ ಮಾಲೀಕ. ಕಾರ್ಮಿಕರ ಕಾರಣದಿಂದಾಗಿ ಮಾಲೀಕನಾದವನು ಕಾರ್ಮಿಕನಾಗಿಯೂ ಕೆಲಸ ಮಾಡುತ್ತಾನೆ ಎಂದು ವಿವರಿಸಿದರು.
ಕಾರ್ಮಿಕ ನಿರೀಕ್ಷಕ ಎಂ.ಸ್ವಾಮಿ ಮಾತನಾಡಿ, ಸರ್ಕಾರದಿಂದ ದೊರೆಯುವ ಪಿಎಂಎಸ್‌ವೈ ಯೋಜನೆಯಲ್ಲಿ ಹಣ ತೊಡಗಿಸಿ ಪ್ರಯೋಜನ ಪಡೆಯಬೇಕು. ಅದೇ ರೀತಿ ಈ ಶ್ರಮ್ ಕಾರ್ಡ್‌ನ್ನು ಪಡೆದುಕೊಳ್ಳಬೇಕು. ಇದಕ್ಕೆ ಬೇಕಾದ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‌ಕುಮಾರ್, ಮುದ್ರಣಕಾರರ ಸಂಘದ ರಾಜ್ಯ ಸಂಚಾಲಕ ಎಂ.ಎಸ್. ಸತೀಶ್, ಸಂಘದ ಗೌರವಾಧ್ಯಕ್ಷ ಎಂ.ಎಸ್. ಶಿವಪ್ರಕಾಶ್ , ರವೀಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯಬೇಕು. ಲಿಂಗ ಆಧಾರದ ಮೇಲೆ ತಾರತಮ್ಯ ನಿಲ್ಲಬೇಕು. ಕಾರ್ಮಿಕರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ನಿವೇಶನ ನೀಡಬೇಕು. ಮುದ್ರಣಕಾರರ ಸಂಘ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಸಂಘವನ್ನು ಯಶಸ್ವಿಯಾಗಿ ನಡೆಸಬೇಕು. ಸಂಘ ಬೆಳೆದರೆ ತಂತಾನೇ ಎಲ್ಲರೂ ಬೆಳೆಯುತ್ತಾರೆ.
- ಸುನಂದಾ ಜಯರಾಂ, ರೈತ ನಾಯಕಿ