ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೊಡ್ಡ ತೇರು ಸಂಭ್ರಮ ಸಡಗರಗಳಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೊಡ್ಡ ತೇರು ಸಂಭ್ರಮ ಸಡಗರಗಳಿಂದ ನಡೆಯಿತು. ಜಾತ್ರೆ ಅಂಗವಾಗಿ ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಎರಡೂ ಬದಿಯಲ್ಲಿ ಕಟ್ಟಿದ್ದ ಹಗ್ಗವನ್ನು ಗೋವಿಂದನ ನಾಮ ಸ್ಮರಣೆಯಲ್ಲಿ ಸಾವಿರಾರು ಭಕ್ತರು ರಥ ಎಳೆದು ಪುನೀತ ಭಾವ ಮೆರೆದರು. ಇದಕ್ಕಾಗಿ ಬೆಳಗ್ಗೆ ೫ ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಮೊದಲಿಗೆ ಕಲ್ಯಾಣೋತ್ಸವ, ಪ್ರಸ್ಥಾನ ಮಂಟಪೋತ್ಸವಗಳ ಅಲಂಕಾರ ಮಾಡಲಾಗಿತ್ತು. ದೇವರಿಗೆ ತುಳಸಿ ಸೇರಿದಂತೆ ವಿವಿಧ ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾರಥೋತ್ಸವಕ್ಕೆ ದೇವರ ಉತ್ಸವ ಮೂರ್ತಿಯನ್ನು ತೇರಿನೊಳಗೆ ಇರಿಸಿ ಸಾವಿರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ವಿವಾಹವಾಗಿರುವ ನೂತನ ದಂಪತಿಗಳು ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಹಣ್ಣು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ನವದಂಪತಿಗಳಲ್ಲದೇ ಹರಕೆ ಹೊತ್ತಿದ್ದ ಅನೇಕ ಭಕ್ತರು ಧೂಪವನ್ನು ಹಾಕುವ ಮೂಲಕ ಭಕ್ತಿ ಮೆರೆದರು. ತೇರಿನ ನಂತರ ರಥದಲ್ಲಿ ಕುಳ್ಳಿರಿಸಿದ್ದ ಉತ್ಸವ ಮೂರ್ತಿಯನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಹರಕೆ ಹೊತ್ತ ಭಕ್ತರು ತಮ್ಮ ಮಂಟಪಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಿದರು.
ಬ್ಯಾರಿಕೇಡ್‌ನಿಂದ ಭಕ್ತರಿಗೆ ಕಿರಿಕಿರಿ:
ತೇರು ಮುಗಿಯುತ್ತಿದ್ದಂತೆಯೇ ಬಸ್ ಹತ್ತಲು, ಹಾಗೂ ದೂರದಲ್ಲೇ ನಿಲ್ಲಿಸಿದ್ದ ತಮ್ಮ ವಾಹನಗಳಿಗೆ ತೆರಳಲು ಭಕ್ತರು ಹಿಂದಿರುಗುತ್ತಿದ್ದರು. ಆದರೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರಿಂದ ಇಲ್ಲಿಂದ ತೆರಳುವ ಭಕ್ತರಿಗೆ ತೊಂದರೆಯಾಗಿ ಪೋಲಿಸರ ನಡುವೆ ವಾಗ್ವಾದ ನಡೆಯಿತು. ಬಸ್ ಹತ್ತುವ ಜನರನ್ನು ಸರತಿ ಸಾಲಿನಲ್ಲಿ ಕಳುಹಿಸುವ ಉದ್ದೇಶದಿಂದ ಬ್ಯಾರಿಕೇಡ್ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡುತ್ತಿದ್ದರು. ನೂರಾರು ಸಂಖ್ಯೆಯ ಸ್ವಂತ ವಾಹನಗಳಲ್ಲಿ ಬಂದಿದ್ದ ಭಕ್ತರು ತಮ್ಮ ವಾಹನಗಳ ಬಳಿಗೆ ನಡೆದುಕೊಂಡು ತೆರಳಲು ಸಹ ತಡೆಯೊಡ್ಡಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು. ವಾಹನ ದಟ್ಟಣೆ ನಿಮಿತ್ತ ದ್ವಿಚಕ್ರ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.