ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ಶಿಕ್ಷಣ ಇಲಾಖೆ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿ ಎದ್ದು ಕಂಡಿತು. ಯಾವುದೇ ಸಂಘ, ಸಂಸ್ಥೆ, ಚುನಾಯಿತ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬಂದವು. ಮತದಾರರ ದಿನಾಚರಣೆಗೆ ಉತ್ಸಾಹವೇ ಇಲ್ಲದಂತಾಗಿ ಸಪ್ಪೆ ಎನಿಸಿತು.
ನಿಗದಿತ ಬೆಳಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆಗೂ ಹೆಚ್ಚು ಕಾಲ 11.12ಕ್ಕೆ ತಡವಾಗಿ ಶುರುವಾಯಿತು. ಇದಕ್ಕೆ ಕಾರಣ ಅಧ್ಯಕ್ಷತೆ ವಹಿಸಬೇಕಿದ್ದ ತಹಸೀಲ್ದಾರ ಮಂಜುಳಾ ನಾಯಕ ಅವರು ತಡವಾಗಿ ಬಂದಿರುವುದರಿಂದ ಕಾರ್ಯಕ್ರಮ ಆರಂಭ ಒಂದು ಗಂಟೆ ವಿಳಂಬವಾಯಿತು.ನ್ಯಾಯಾಧೀಶರನ್ನೇ ಕಾಯಿಸಿದ ಹುಕ್ಕೇರಿ ತಹಸೀಲದಾರ:
ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಬಿಇಒ ಪ್ರಭಾವತಿ ಪಾಟೀಲ, ಸಿಡಿಪಿಒ ಎಚ್.ಹೊಳೆಪ್ಪ, ವಕೀಲರ ಸಂಘದ ಅಧ್ಯಕ್ಷ ಅನೀಸ ವಂಟಮೂರಿ, ಎಜಿಪಿ ಅನೀಲ ಕರೋಶಿ, ಗ್ರೇಡ್-2 ತಹಸೀಲದಾರ ಪ್ರಕಾಶ ಕಲ್ಲೋಳಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ, ಚುನಾವಣಾ ಶಾಖೆ ಸಿಬ್ಬಂದಿ ಸಂತೋಷ ನಾಯಕರ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಸಮಯದ ಅಭಾವವಿದೆ ಎಂದು ತಹಸೀಲ್ದಾರ ತಡವಾಗಿ ಬಂದಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿ ಮಾತು ಆರಂಭಿಸಿ, ಅಂಬೇಡ್ಕರ ಅವರು ರಚಿಸಿದ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ನಮ್ಮದಾಗಿದೆ. ಮತ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ಮತ ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.