ಭಟ್ಕಳ: ಕೋಲಾರದಿಂದ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವತಿಯರು ಮುರ್ಡೇಶ್ವರ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಕೊಪ್ಪಳ ಜಿಲ್ಲೆಯ ಬಾಲಕನೋರ್ವ ತೆರೆದ ಬಾವಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ(೧೪) ಎಂದು ಗುರುತಿಸಲಾಗಿದೆ.ಗಾಣದಾಳ ಶಾಲೆಯ ೧೦೦ ವಿದ್ಯಾರ್ಥಿಗಳು ಜೋಗ ಫಾಲ್ಸ್, ಕೊಲ್ಲೂರು ಮತ್ತಿತರ ಕಡೆ ಪ್ರವಾಸಕ್ಕೆ ಎರಡು ಬಸ್ಸುಗಳಲ್ಲಿ ಬಂದಿದ್ದರು. ಇವರೊಂದಿಗೆ ೧೩ ಜನ ಶಿಕ್ಷಕರಿದ್ದರು. ಮಂಗಳವಾರ ರಾತ್ರಿ ಗಾಣದಾಳದಿಂದ ಹೊರಟಿದ್ದ ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆ ಜೋಗ ಜಲಪಾತ ವೀಕ್ಷಿಸಿ ನಂತರ ಕೊಲ್ಲೂರಿಗೆ ತೆರಳಲು ಹೊನ್ನಾವರ ಮಾರ್ಗವಾಗಿ ಆಗಮಿಸಿದ ಸಂದರ್ಭದಲ್ಲಿ ಮಾತ್ರೆ ಖರೀದಿಗಾಗಿ ಬಸ್ ನಿಲ್ದಾಣಕ್ಕಿಂತ ಸ್ವಲ್ಪ ದೂರದಲ್ಲಿ ಬಸ್ಸನ್ನು ನಿಲ್ಲಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರಿನ ಔಷಧಿ ಅಂಗಡಿಯಲ್ಲಿ ಗುಳಿಗೆ ಖರೀದಿಸಲು ತೆರಳಿದ್ದರು. ಈ ಸಂದರ್ಭ ಕೆಲವು ಬಾಲಕರು ಮೂತ್ರ ವಿಸರ್ಜನೆಗೆಂದು ಔಷಧಿ ಅಂಗಡಿಯ ಹಿಂದಿರುವ ಖುಲ್ಲಾ ಜಾಗಕ್ಕೆ ತೆರಳಿದ್ದ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಅಕಸ್ಮಾತ್ ಬಾಲಕ ಬಿದ್ದಿದ್ದಾನೆ. ತಕ್ಷಣ ಜತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿ ತಕ್ಷಣ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಸ್ಪಂದಿಸದೆ ಮೃತಪಟ್ಟಿದ್ದಾನೆ.ಬಸ್ ನಿರ್ವಾಹಕನಿಂದ ಅನುಚಿತ ವರ್ತನೆ: ವಿದ್ಯಾರ್ಥಿನಿದೂರು- ನಿರ್ವಾಹಕನಿಂದಲೂ ಪ್ರತಿದೂರು ದಾಖಲು
ಯಲ್ಲಾಪುರ: ನಿರ್ವಾಹಕರೊಬ್ಬರು ಬಸ್‌ನಲ್ಲಿ ಅನುಚಿತ ವರ್ತನೆ ತೋರಿ ಅವಮಾನಿಸಿದ್ದಾರೆಂದು ವಿದ್ಯಾರ್ಥಿನಿಯೊಬ್ಬರು ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿದ್ಯಾರ್ಥಿನಿ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ನಿರ್ವಾಹಕ ಪ್ರತಿದೂರು ದಾಖಲಿಸಿದ್ದಾರೆ.ತಾಲೂಕಿನ ಅಲ್ಕೇರಿಯ ವಿದ್ಯಾರ್ಥಿನಿಯೊಬ್ಬರು ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಮಂಗಳವಾರ ಸಂಜೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುವಾಗ, ನಿರ್ವಾಹಕರ ಬಳಿ ತನ್ನ ಸಂಬಂಧಿಯೊಬ್ಬರು ಬಸ್ ಹತ್ತಿಲ್ಲ. ಆದ್ದರಿಂದ ತಾನು ಬಸ್ಸಿನಿಂದ ಇಳಿಯುವೆನೆಂದು ಹೇಳಿ, ಇಳಿಯಲು ಪ್ರಯತ್ನಿಸಿದ್ದಾರೆ. ಆ ವೇಳೆ ನಿರ್ವಾಹಕ ಸಿದ್ದಪ್ಪ ಬಿರಾದಾರ್ ತಡೆದು, ದೂಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ.ವಿದ್ಯಾರ್ಥಿನಿ ವಿರುದ್ಧ ನಿರ್ವಾಹಕ ಸಿದ್ದಪ್ಪ ಬಿರಾದಾರ ಪ್ರತಿದೂರು ನೀಡಿದ್ದಾರೆ. ಚಲಿಸುತ್ತಿದ್ದ ಬಸ್‌ನಿಂದ ಇಳಿಯಲು ಯತ್ನಿಸಿದ ಕಾರಣಕ್ಕೆ ರಕ್ಷಣೆಗಾಗಿ ಆಕೆಯನ್ನು ಹಿಡಿದಿದ್ದೇನೆ. ಆದರೆ ವಿದ್ಯಾರ್ಥಿನಿ ಕಿರವತ್ತಿ ಬಳಿ ಸುಮಾರು ೧೫ ಜನರನ್ನು ಸೇರಿಸಿ ಬಸ್ ಕಿರವತ್ತಿಗೆ ಬರುತ್ತಿದ್ದಂತೆ ನಿಲ್ಲಿಸಿ, ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ವಿದ್ಯಾರ್ಥಿನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾದಾಗ ಪ್ರಯಾಣಿಕರು, ಚಾಲಕ ತಪ್ಪಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿದ್ಯಾರ್ಥಿನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಿರ್ವಾಹಕ ಪ್ರತಿದೂರು ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.