ಸರ್ಕಾರಿ ಅಧಿಕಾರಿಗಳ ಅಪ್ ಅಂಡ್ ಡೌನ್ ಗೆ ಬೀಳದ ಬ್ರೇಕ್!

KannadaprabhaNewsNetwork |  
Published : Dec 05, 2023, 01:30 AM IST
4ಕೆಆರ್ ಎಂಎನ್‌ 1.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣ | Kannada Prabha

ಸಾರಾಂಶ

ರಾಮನಗರ: ಜಿಲ್ಲಾಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯಿತಿ ಸಿಬ್ಬಂದಿವರೆಗೆ ಎಲ್ಲ ಸರ್ಕಾರಿ ನೌಕರರು ಅಪ್ ಅಂಡ್ ಡೌನ್ ಬಿಟ್ಟು ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿ ವಾಸ್ತವ್ಯ ಹೂಡಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಆದೇಶಕ್ಕೆ ಜಿಲ್ಲೆಯಲ್ಲಿ ಕವಡೆ ಕಾಸಿನ ಕಿಮ್ಮಿತ್ತು ಇಲ್ಲದಂತಾಗಿದೆ.

ರಾಮನಗರ: ಜಿಲ್ಲಾಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯಿತಿ ಸಿಬ್ಬಂದಿವರೆಗೆ ಎಲ್ಲ ಸರ್ಕಾರಿ ನೌಕರರು ಅಪ್ ಅಂಡ್ ಡೌನ್ ಬಿಟ್ಟು ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿ ವಾಸ್ತವ್ಯ ಹೂಡಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಆದೇಶಕ್ಕೆ ಜಿಲ್ಲೆಯಲ್ಲಿ ಕವಡೆ ಕಾಸಿನ ಕಿಮ್ಮಿತ್ತು ಇಲ್ಲದಂತಾಗಿದೆ.

ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ದಿನದ 24 ಗಂಟೆಯೂ ಲಭ್ಯವಾಗಬೇಕು. ಇದರಿಂದ ಸರ್ಕಾರಿ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತದೆ ಎಂಬ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸರ್ಕಾರಿ ನೌಕರರಿಗೆ ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿಕೊಳ್ಳಬೇಕೆಂದು ಆದೇಶಿಸಿದ್ದರು.

ಕಳೆದ ಜೂನ್‌ 26ರಂದು ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಕುಮಾರ್ ರವರು ಕೇಂದ್ರ ಸ್ಥಾನದಲ್ಲಿಯೇ ಮನೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ 60 ದಿನಗಳ ಕಾಲಾವಕಾಶ ನೀಡಿದ್ದರು. ಅಲ್ಲದೆ, ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಇದೇ ಮಾತನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಇಷ್ಟಾದರು ಅಧಿಕಾರಿಗಳು ಮತ್ತು ಸಿಬ್ಬಂದಿ ಅಪ್ ಅಂಡ್‌ ಡೌನ್‌ ಮಾಡುವುದನ್ನು ಬಿಟ್ಟಿಲ್ಲ.

ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ತಾನು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮನೆ ಮಾಡಿಕೊಂಡಿರುವ ಬಗ್ಗೆ ದೃಢೀಕರಿಸಬೇಕಿತ್ತು. ಬಾಡಿಗೆ ಮನೆಯ ವಿಳಾಸ, ಕರಾರು ಪತ್ರ, ಫೋಟೋ ಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ತಲುಪಿಸಬೇಕಿತ್ತು. ಆ ಮಾಹಿತಿಯನ್ನು ಸಂಗ್ರಹಿಸಿ ವಾರ್ತಾ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚನೆ ನೀಡಲಾಗಿತ್ತು.

ಡಿ.ಕೆ.ಶಿವಕುಮಾರ್ ರವರು ಆದೇಶ ಹೊರಡಿಸಿ 5 ತಿಂಗಳು ಕಳೆದಿದೆ. ಇಲ್ಲಿವರೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟ ಸೇರಿ 72 ಮಂದಿ ಅಧಿಕಾರಿಗಳು ಮಾತ್ರವಷ್ಟೇ ಪತ್ರದ ಮೂಲಕ ತಾವು ಕೇಂದ್ರ ಸ್ಥಾನದಲ್ಲಿ ಮನೆ ಮಾಡಿಕೊಂಡಿದ್ದೇವೆಂದು ತಿಳಿಸಿದ್ದಾರೆ. ಇವರಲ್ಲಿ ಕೆಲವರು ಮನೆ ವಿಳಾಸವನ್ನು ಮಾತ್ರ ನೀಡಿದ್ದು, ಮನೆ ಫೋಟೋಗಳನ್ನು ಕೊಟ್ಟಿಲ್ಲ.

ಇದರಲ್ಲಿರುವ ಬಹುತೇಕ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಬಹುತೇಕ ಸರ್ಕಾರಿ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿರುಸಂಬಂಧಿಕರು ಮತ್ತು ಸ್ನೇಹಿತರ ಮನೆ ವಿಳಾಸ, ಫೋಟೋಗಳನ್ನು ನೀಡಿದ್ದಾರೆ. ಇಲ್ಲದವರು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮನೆಯನ್ನೇ ಬಾಡಿಗೆ ಮನೆ ಎಂದು ತೋರಿಸಿದ್ದಾರೆ. ಯಾರೂ ಕೂಡ ಮನೆ ಬಾಡಿಗೆಯ ಕರಾರುಪತ್ರ, ಫೋಟೋಗಳನ್ನು ಪತ್ರದಲ್ಲಿ ಅಳವಡಿಸಿಲ್ಲ. ಇದೆಲ್ಲವು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ.

ವಾರ್ತಾ ಇಲಾಖೆ ತಮ್ಮ ಕಚೇರಿಗೆ 72 ಅಧಿಕಾರಿಗಳು ಸಲ್ಲಿಸಿರುವ ಮನೆ ವಿಳಾಸ ವಿವರವನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದಾರೆ. ಉಳಿದಂತೆ ಆಯಾಯ ತಾಲೂಕುಗಳ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಳಿದ ತಮ್ಮ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಿರುವ ಕುರಿತು ಮನೆ ವಿಳಾಸದ ವಿವರಗಳನ್ನು ಒದಗಿಸುವುದು ಬಾಕಿ ಇದೆ.

ಬಾಕ್ಸ್‌..........

ಬೆಳಗ್ಗೆ ಮತ್ತು ಸಂಜೆ ಪ್ರಯಾಣ

ಬಹುತೇಕ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಿಂದ ಅಪ್‌ ಅಂಡ್ ಡೌನ್ ಮಾಡುತ್ತಿದ್ದಾರೆ. ಇದು ಜಿಲ್ಲಾ ಕೇಂದ್ರ ರಾಮನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಉಳಿದ ತಾಲೂಕುಗಳಾದ ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳ ಪರಿಸ್ಥಿತಿಯೂ ಹೀಗೆಯೇ ಇದೆ.

ಬೆಳಗ್ಗೆ ಮತ್ತು ಸಂಜೆ ವೇಳೆಗೆ ಸರ್ಕಾರಿ ನೌಕರರು ಜಿಲ್ಲಾ ಕೇಂದ್ರದಲ್ಲಿ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಪೊಲೀಸ್ ಭವನ ಬಳಿಯ ಬಸ್ ನಿಲುಗಡೆ ಸ್ಥಳ ಮತ್ತು ತಾಲೂಕು ಕೇಂದ್ರಗಳಲ್ಲಿಯೂ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಕಾಣ ಸಿಗುತ್ತಾರೆ. ಇವರೆಲ್ಲರು ಬಸ್ ಮತ್ತು ರೈಲಿನಲ್ಲಿ ಅಪ್ ಅಂಡ್ ಡೌನ್ ಮಾಡುತ್ತಿದ್ದಾರೆ. ಇದೇನು ಗುಟ್ಟಾಗಿ ಉಳಿದಿಲ್ಲ.

ಬಾಕ್ಸ್‌.....................

ಗಡಿ ದಾಟುತ್ತಿವೆ ಸರ್ಕಾರಿ ವಾಹನಗಳು!

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಜಿಲ್ಲಾಮಟ್ಟದ ಅಧಿಕಾರಿಗಳು ಮಂಡ್ಯ ನಗರದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಅವರನ್ನು ಬೆಳಗ್ಗೆ ಕಚೇರಿಗೆ ಕರೆತರಲು ಮತ್ತು ಸಂಜೆ ಮನೆಗೆ ವಾಪಸ್ ಕರೆದೊಯ್ಯಲು ಸರ್ಕಾರಿ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ನಿತ್ಯ ರಾಮನಗರದ ಸರ್ಕಾರಿ ವಾಹನಗಳು ಗಡಿ ದಾಟಿ ಮಂಡ್ಯ ನಗರ ಪ್ರವೇಶಿಸುತ್ತಿವೆ. ಇಷ್ಟೇ ಅಲ್ಲದೆ, ರೇಲ್ವೆ ಮತ್ತು ಬಸ್ ನಿಲ್ದಾಣಗಳ ಬಳಿಯೂ ಸರ್ಕಾರಿ ವಾಹನಗಳು ಅಧಿಕಾರಿಗಳ ಬರುವಿಕೆಯನ್ನೇ ಕಾಯುತ್ತಿರುತ್ತವೆ. ಉಪಮುಖ್ಯಮಂತ್ರಿ ಗಳ ಆದೇಶಕ್ಕೂ ಈ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ.

ಕೋಟ್ ...................

ರಾಮನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಪೈಕಿ 72 ಮಂದಿ ಅಧಿಕಾರಿಗಳು ಮಾತ್ರ ತಮ್ಮ ಭಾವಚಿತ್ರ, ಮನೆ ,ಕಚೇರಿ ವಿಳಾಸ, ಮೊಬೈಲ್‌ ನಂಬರ್‌ ಮಾಹಿತಿ ನೀಡಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ.

- ರಮೇಶ್ ಬಾಬು, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಮನಗರ4ಕೆಆರ್ ಎಂಎನ್‌ 1.ಜೆಪಿಜಿ

ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ