ಮಕ್ಕಳು ಕೇಳಿದ ಯಾವುದೇ ಕಠಿಣ ಸಂಖ್ಯೆಗಳಿಗಾಗಲಿ, ದೊಡ್ಡ ದೊಡ್ಡ ಲೆಕ್ಕಗಳಿಗಾಗಲಿ, ಅವರು ಕ್ಷಣಾರ್ಧದಲ್ಲಿ ಉತ್ತರ ನೀಡಿದ ರೀತಿ ಅಕ್ಷರಶಃ ಕಣ್ತುಂಬಿಕೊಳ್ಳುವಂತಿತ್ತು. ಕಂಪ್ಯೂಟರ್‌ನ ವೇಗವನ್ನು ಮೀರಿಸುವಂತಹ ಅವರ ಉತ್ತರಗಳನ್ನು ನೋಡಿ ಮಕ್ಕಳು ಆಶ್ಚರ್ಯದಿಂದ ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಹದ ನ್ಯೂನತೆಗಳನ್ನು ಲೆಕ್ಕಿಸದೆ ಅಸಾಧಾರಣ ಸಾಧನೆ ಮಾಡಿದ ಇವರ ಭವ್ಯ ಜೀವನಕಥೆ ಮಕ್ಕಳಿಗೆ ಪ್ರೇರಣೆಯಾಗಿ ಪರಿಣಮಿಸಿತು. “ಸಾಧಿಸಲು ಮನಸ್ಸಿದ್ದರೆ ಯಾವುದೇ ನ್ಯೂನತೆ ಅಡ್ಡಿಯಾಗುವುದಿಲ್ಲ” ಎಂಬ ಸಂದೇಶವನ್ನು ಬದುಕಿನಲ್ಲೇ ಪ್ರತಿಬಿಂಬಿಸಿರುವ ಉದಾಹರಣೆಯಾಗಿ ಅವರು ವಿದ್ಯಾರ್ಥಿಗಳ ಮನಸ್ಸು ಸೆಳೆದರು.
ಕನ್ನಡಪ್ರಭ ವಾರ್ತೆ ಹಾಸನ
ಮಾನವ ಗಣಕಯಂತ್ರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಸವರಾಜು ಉಮ್ರಾಣಿ ಅವರು ಮಂಗಳವಾರ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸ್ಕಾಲರ್ಸ್ ವರ್ಲ್ಡ್ ಹಾಗೂ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಗಣಿತ ಸಾಮರ್ಥ್ಯದ ಅಮೋಘ ಪ್ರದರ್ಶನ ನೀಡಿದರು. ಮಕ್ಕಳು ಕೇಳಿದ ಯಾವುದೇ ಕಠಿಣ ಸಂಖ್ಯೆಗಳಿಗಾಗಲಿ, ದೊಡ್ಡ ದೊಡ್ಡ ಲೆಕ್ಕಗಳಿಗಾಗಲಿ, ಅವರು ಕ್ಷಣಾರ್ಧದಲ್ಲಿ ಉತ್ತರ ನೀಡಿದ ರೀತಿ ಅಕ್ಷರಶಃ ಕಣ್ತುಂಬಿಕೊಳ್ಳುವಂತಿತ್ತು. ಕಂಪ್ಯೂಟರ್‌ನ ವೇಗವನ್ನು ಮೀರಿಸುವಂತಹ ಅವರ ಉತ್ತರಗಳನ್ನು ನೋಡಿ ಮಕ್ಕಳು ಆಶ್ಚರ್ಯದಿಂದ ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಹದ ನ್ಯೂನತೆಗಳನ್ನು ಲೆಕ್ಕಿಸದೆ ಅಸಾಧಾರಣ ಸಾಧನೆ ಮಾಡಿದ ಇವರ ಭವ್ಯ ಜೀವನಕಥೆ ಮಕ್ಕಳಿಗೆ ಪ್ರೇರಣೆಯಾಗಿ ಪರಿಣಮಿಸಿತು. “ಸಾಧಿಸಲು ಮನಸ್ಸಿದ್ದರೆ ಯಾವುದೇ ನ್ಯೂನತೆ ಅಡ್ಡಿಯಾಗುವುದಿಲ್ಲ” ಎಂಬ ಸಂದೇಶವನ್ನು ಬದುಕಿನಲ್ಲೇ ಪ್ರತಿಬಿಂಬಿಸಿರುವ ಉದಾಹರಣೆಯಾಗಿ ಅವರು ವಿದ್ಯಾರ್ಥಿಗಳ ಮನಸ್ಸು ಸೆಳೆದರು.
ಅಂತಾರಾಷ್ಟ್ರೀಯ ಮಟ್ಟದ ಗಣಿತ ಮತ್ತು ವ್ಯಕ್ತಿತ್ವ ವಿಕಸನ ತಜ್ಞರಾಗಿರುವ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ ಏಕಾಗ್ರತೆಯನ್ನು ವೃದ್ಧಿಪಡಿಸಲು ಯೋಗ, ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವವನ್ನು ವಿವರಿಸಿದರು. ಮೊಬೈಲ್ ಬಿಟ್ಟು ಪುಸ್ತಕ ಹಿಡಿದರೆ ನಿಮ್ಮ ಜ್ಞಾನ ಭಂಡಾರ ಬೆಳೆಯುತ್ತದೆ ಎಂದು ಅವರು ಮಕ್ಕಳಿಗೆ ಸಲಹೆ ನೀಡಿ ಮನವಿ ಮಾಡಿದರು. ಗಣಿತವನ್ನು ಭಯದ ವಿಷಯವಲ್ಲ, ಆನಂದದಾಯಕ ಕಲಿಕೆಯ ಸಾಧನವಾಗಿಸಬೇಕೆಂದು ಶಿಕ್ಷಕರಿಗೂ ಸಂದೇಶ ನೀಡಿದ ಅವರು, ಸರಳ ಗಣಿತ ತಂತ್ರಗಳನ್ನು ಉಪಯೋಗಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಅಗತ್ಯತೆಯನ್ನು ಒತ್ತಿಹೇಳಿದರು.ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಅವರು ಬಸವರಾಜು ಉಮ್ರಾಣಿಗೆ ಗೌರವ ಸಮರ್ಪಿಸಿದರು. ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಇವರ ಸಾಧನೆಯನ್ನು ಶ್ಲಾಘಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.