ಮಹಿಳಾ ಆಯೋಗದ ಕೇಂದ್ರ ಕಚೇರಿಯಲ್ಲಿ ಶೀಘ್ರವೇ ‘ಕಾಲ್‌ ಸೆಂಟರ್‌’: ಡಾ. ನಾಗಲಕ್ಷ್ಮಿಚೌಧರಿ

KannadaprabhaNewsNetwork | Published : Mar 6, 2024 2:15 AM

ಸಾರಾಂಶ

ಮಂಗಳೂರು ಲೇಡಿಗೋಶನ್‌ ಆಸ್ಪತ್ರೆ ಆವರಣದ ದ.ಕ. ಜಿಲ್ಲಾ ಮಟ್ಟದ ಸಖಿ ವನ್‌ಸ್ಟಾಪ್‌ ಸೆಂಟರ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮಾನಸಿಕವಾಗಿಯೂ ತೊಂದರೆ ಅನುಭವಿಸುತ್ತಾರೆ. ಈಗಾಗಲೇ ರಾಜ್ಯದಲ್ಲಿ ‘ಸಖಿ’ ವನ್‌ ಸ್ಟಾಪ್‌ ಸೆಂಟರ್‌ಗಳು ಇಂತಹ ಮಹಿಳೆಯರಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಹಿಳಾ ಆಯೋಗ ಶೀಘ್ರವೇ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಶೇಷ ‘ಕಾಲ್‌ ಸೆಂಟರ್‌’ ಆರಂಭಿಸಲಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

ಮಂಗಳೂರು ಲೇಡಿಗೋಶನ್‌ ಆಸ್ಪತ್ರೆ ಆವರಣದ ದ.ಕ. ಜಿಲ್ಲಾ ಮಟ್ಟದ ಸಖಿ ವನ್‌ಸ್ಟಾಪ್‌ ಸೆಂಟರ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಸಕಲ ರೀತಿಯ ಸೌಲಭ್ಯಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ಜತೆಗೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ನೀಡಲಾಗುತ್ತಿದೆ. ಈ ಬಗ್ಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೆಲ್ಪ್‌ಡೆಸ್ಕ್‌ಗಳನ್ನು (ಸಹಾಯವಾಣಿ ಘಟಕ) ಆರಂಭಿಸಲು ಕ್ರಮ ವಹಿಸಲಾಗುವುದು. ಮಹಿಳೆಯ ಹಕ್ಕುಗಳ ಹಾಗೂ ಸೌಲಭ್ಯಗಳ ಬಗ್ಗೆ ಶೇ. 99ರಷ್ಟು ಮಹಿಳೆಯರಿಗೆ ಜಾಗೃತಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ಆಯೋಗದ ಅಧ್ಯಕ್ಷೆಯಾಗಿ ಪ್ರಮುಖ ಆದ್ಯತೆ ನೀಡಲಿದ್ದೇನೆ ಎಂದು ಅವರು ಹೇಳಿದರು.

ಮಂಗಳೂರಿನ ಲೇಡಿಗೋಶನ್‌ ಆಸ್ಪತ್ರೆಯಲ್ಲಿರುವ ಸಖಿ ಕೇಂದ್ರದಲ್ಲಿ ಕಳೆದ ಫೆಬ್ರವರಿ ತಿಂಗಳೊಂದರಲ್ಲಿ 30 ಪ್ರಕರಣಗಳು ದಾಖಲಾಗಿವೆ. ಅವರಿಗೆ ಅಗತ್ಯ ಸಾಂತ್ವನ, ನೆರವಿನ ಜತೆಗೆ ಅವರಿಗೆ ಉತ್ತಮ ಜೀವನವನ್ನು ಒದಗಿಸುವ ನಿಟ್ಟಿನಲ್ಲಿ ಸಖಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರಿನ ಸಖಿ ಕೇಂದ್ರ ಸುಸಜ್ಜಿತ ಸೌಲಭ್ಯಗಳೊಂದಿಗೆ ಮಾದರಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಡಿಗೋಶನ್‌ ಆಸ್ಪತ್ರೆ ಅಧೀಕ್ಷಕ ಡಾ. ದುರ್ಗಾ ಪ್ರಸಾದ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್‌, ಸಖಿ ವನ್‌ಸ್ಟಾಪ್‌ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ಇದ್ದರು.

Share this article