ಕನ್ನಡಪ್ರಭ ವಾರ್ತೆ ಮಂಗಳೂರುಗುಜರಾತಿನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ ಹಡಗು ಮಂಗಳೂರಿನ ಎನ್‌ಎಂಪಿಟಿಗೆ ಸಮೀಪವಿರುವ ಸುರತ್ಕಲ್ ಬಳಿ ಸಮುದ್ರದ ಮಧ್ಯದಲ್ಲಿ ಲಂಗರು ಹಾಕಿದೆ.
ಈ ಕುರಿತಂತೆ ಎಸ್ಪಿ ಮಿಥುನ್, ಹಡಗಿನಲ್ಲಿ ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದೆ. ಸದ್ಯಕ್ಕೆ ಯಾವುದೇ ತೈಲ ಸೋರಿಕೆಯಾಗಿಲ್ಲ, ತಜ್ಞರ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟವರು ನಿರ್ಧರಿಸುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ನೌಕೆಯಿಂದ ಸದ್ಯ ಅಪಾಯ ಇಲ್ಲ: ದ.ಕ. ಡಿಸಿಮಂಗಳೂರು: ಸುರತ್ಕಲ್ ತೀರದ ಸಮುದ್ರ ಮಧ್ಯೆ ಲಂಗರು ಹಾಕಿರುವ ಸರಕು ನೌಕೆಯಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ದ.ಕ. ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಮಾರ್ಗದರ್ಶನ ಮತ್ತು ನೆರವಿನೊಂದಿಗೆ ಸಂಭಾವ್ಯ ಅವಘಡವನ್ನು ಎದುರಿಸಲು ಲಭ್ಯವಿರುವ ಉಪಕರಣಗಳು, ಸಲಕರಣೆಗಳು ಮತ್ತು ಮಾನವ ಸಂಪನ್ಮೂಲದೊಂದಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.