ತೀವ್ರತೆ ಪಡೆದ ಮುಖ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣ

KannadaprabhaNewsNetwork |  
Published : Oct 05, 2024, 01:36 AM IST
ಮುಖ್ಯಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಅಥಣಿ ಪುರಸಭೆ ಎದುರು ಧರಣಿ ಆರಂಭಿಸಿದ ಅಥಣಿ ಪುರಸಭೆ ಸಿಬ್ಬಂದಿ | Kannada Prabha

ಸಾರಾಂಶ

ಅಥಣಿ ಪುರಸಭೆ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಅಥಣಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ.

ಕನ್ನಡಪ್ರಭ ವಾರ್ತೆ ಅಥಣಿ

ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಅಥಣಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ. ಗುರುವಾರ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಗುರುವಾರ ರಾತ್ರಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಂದೆಡೆ ಹಲ್ಲೆ ಆರೋಪ ಎದುರಿಸುತ್ತಿರುವ ವಕೀಲ ಮಿತೇಶ ಪಟ್ಟಣ ಗುರುವಾರ ಮಿರಜ್‌ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರು, ತಡರಾತ್ರಿ ವಕೀಲ ಮಿತೇಶ ಪಟ್ಟಣ ವಿರುದ್ಧ ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದರೆ, ಇದಕ್ಕೆ ಪ್ರತಿಯಾಗಿ ಮಿತೇಶ ಪಟ್ಟಣ ಅವರು ಪ್ರತಿದೂರು ದಾಖಲಿಸಿದ್ದಾರೆ.

ಪುರಸಭೆ ಸಿಬ್ಬಂದಿ, ಸದಸ್ಯರ ಧರಣಿ:

ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ಪುರಸಭೆ ಪೌರ ನೌಕರರ ಸಂಘದಿಂದ ಅಥಣಿ ಪುರಸಭೆಯ ಸಿಬ್ಬಂದಿ ಹಾಗೂ ಸದಸ್ಯರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಬೆಳಗ್ಗೆ ಸಭೆ ಸೇರಿದ ಪುರಸಭೆ ಸಿಬ್ಬಂದಿ ಘಟನೆ ಖಂಡಿಸಿ, ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ, ಅಥಣಿ ತಾಲೂಕು ವಕೀಲರ ಸಂಘ, ತಹಸೀಲ್ದಾರ್ ಹಾಗೂ ಎಸಿಗೆ ಮನವಿ ಸಲ್ಲಿಸಿದರು.

ವಕೀಲ ಮಿತೇಶ ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಧರಣಿ ನಡೆಯಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪುರಸಭೆ ಸದಸ್ಯರ ಬೆಂಬಲ: ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಮತ್ತು ಉಪಾಧ್ಯಕ್ಷೆ ಭುನೇಶ್ವರಿ ಯಕ್ಕಂಚಿ ಮತ್ತು 27 ಜನ ಪುರಸಭೆ ಸದಸ್ಯರು ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಜಿ ಸೈನಿಕರ ಸಂಘ ಅಥಣಿ ಪುರಸಭೆ ನೌಕರ ಸಂಘಟನೆಗಳಾದ ರಾಯಭಾಗ ಚಿಂಚಲಿ ರಬಕವಿ ಬನಹಟ್ಟಿ ಬೆಂಬಲ ವ್ಯಕ್ತಪಡಿಸಿವೆ. ಪುರಸಭೆ ಸದಸ್ಯರ ಧರಣಿ ನಡೆಸಿದ್ದರಿಂದ ಪಟ್ಟಣದಲ್ಲಿ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಬೀದಿದೀಪ ಮುಂತಾದ ಸೇವೆಗಳು ಬಂದ್‌ ಆಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ