ಕಡೆಚೂರು ಬಾಡಿಯಾಳದಲ್ಲಿ ವಿಷ ಪ್ರಳಯ

KannadaprabhaNewsNetwork |  
Published : Sep 24, 2026, 01:15 AM IST
ಕಡೇಚೂರು : ಬದುಕು ಚೂರು, ಚೂರು..! | Kannada Prabha

ಸಾರಾಂಶ

ಇಲ್ಲಿನ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಫಾರ್ಮಾ ಕಂಪನಿಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲ ಹಾಗೂ ತ್ಯಾಜ್ಯದಿಂದಾಗಿ ಸುತ್ತಮುತ್ತಲ ಜನ-ಜಲ-ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ ಎಂಬುದಾಗಿ ಸರ್ಕಾರಿ ಪ್ರಯೋಗಾಲಯದ ವರದಿಗಳು ದೃಢಪಡಿಸಿದ್ದರೂ, ಕಂಪನಿಗಳ ಕಳ್ಳಾಟ ಮಾತ್ರ ಇನ್ನೂ ನಿಂತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಇಲ್ಲಿನ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಫಾರ್ಮಾ ಕಂಪನಿಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲ ಹಾಗೂ ತ್ಯಾಜ್ಯದಿಂದಾಗಿ ಸುತ್ತಮುತ್ತಲ ಜನ-ಜಲ-ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ ಎಂಬುದಾಗಿ ಸರ್ಕಾರಿ ಪ್ರಯೋಗಾಲಯದ ವರದಿಗಳು ದೃಢಪಡಿಸಿದ್ದರೂ, ಕಂಪನಿಗಳ ಕಳ್ಳಾಟ ಮಾತ್ರ ಇನ್ನೂ ನಿಂತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಬುಧವಾರ ಮಳೆ ಬಂದ ಸಂದರ್ಭ ಕೈಗಾರಿಕಾ ಪ್ರದೇಶದ ಸಾಮೂಹಿಕ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ ಹರಿದು ಬಂದ ನೀರು, ಚರಂಡಿಗಳ ಮೂಲಕ ಹಳ್ಳಕ್ಕೆ ಸೇರಿ, ಇಡೀ ಪ್ರದೇಶದವನ್ನೇ ವಿಷಮ ಸ್ಥಿತಿಗೆ ತರಲು ಹೊರಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ವಿಷಾನಿಲ ಸೋರಿಕೆಯಿಂದ ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಹೊರಬಿಡುವಿಕೆಯಿಂದ ಜೀವ ಸಂಕುಲದ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಘಟನೆಗಳು ಕಣ್ಣೆದುರಿಗೇ ನಡೆಯುತ್ತಿದ್ದರೂ ಸರ್ಕಾರದ ಸೂಚನೆಗಳನ್ನು ಪಾಲಿಸದೇ, ಇಂತಹ ಚಟುವಟಿಕೆಗಳ ಮೂಲಕ ಜನರ ಜೀವದ ಚೆಲ್ಲಾಟ ಚೆಲ್ಲಾಟವಾಡುತ್ತಿರುವ ಕಂಪನಿಗಳ ಕಳ್ಳಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದೊಂದು ದಿನ ಈ ಭಾಗದಲ್ಲಿ ಜನರ ಮಾರಣಹೋಮಕ್ಕೆ, ಲಕ್ಷಾಂತರ ಜಲಚರಗಳ ಸಾವಿಗೆ, ಪರಿಸರ-ಶುದ್ಧ ಗಾಳಿ ಮಾಯವಾಗಿ ಇಡೀ ಪ್ರದೇಶವನ್ನು ವಿಷಾನಿಲ ಆವರಿಸಿಕೊಳ್ಳುವ ಭೀತಿ ಎದುರಾಗಿದೆ.

ಕೆಮಿಕಲ್‌ ಫಾರ್ಮಾಗಳಿಂದ ಹೊರಹೊಮ್ಮುವ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ, ನೇರವಾಗಿ ಚರಂಡಿಗಳ ಮೂಲಕ ಹಳ್ಳಕ್ಕೆ ಬಿಡುತ್ತಿರುವ ದೂರುಗಳ ಹಿನ್ನೆಲೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಗ್ರಹಿಸಿದ ನೀರಿನ ಮಾದರಿಯ ಪ್ರಯೋಗಾಲಯ ವರದಿ ಆಘಾತ ಮೂಡಿಸಿದೆ.

ನೀರಿನಲ್ಲಿ ಸಿಓಡಿ (Chemical Oxygen Demand) ಮಟ್ಟ ಪ್ರತಿ ಲೀಟರಿಗೆ 2400 ಮಿಲಿ ಗ್ರಾಂ ಇರುವುದು ಅತ್ಯಂತ ಗಂಭೀರ ಹಾಗೂ ಅಪಾಯಕಾರಿ ಮಾಲಿನ್ಯದ ಸೂಚಕವಾಗಿದೆ. ಅನುಮತಿತ ಮಿತಿಗಿಂತ ಸುಮಾರು 10 ಪಟ್ಟು ಹೆಚ್ಚು ರಾಸಾಯನಿಕ ಮಾಲಿನ್ಯ ಭಾರ ಇರುವುದರಿಂದ, ಆಮ್ಲಜನಕದ ಸಂಪೂರ್ಣ ಕುಸಿತಗೊಂಡು, ನೀರಿನಲ್ಲಿ ಕರಗಿದ ಆಮ್ಲಜನಕ ಶೂನ್ಯಮಟ್ಟಕ್ಕೆ ಕುಸಿಯುತ್ತದೆ. ಮೀನುಗಳು ಮತ್ತು ಜಲಚರಗಳು ಉಸಿರುಗಟ್ಟಿ ಸಾಮೂಹಿಕವಾಗಿ ಸಾಯುತ್ತವೆ.

ನೀರಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿ, ಕೊಳೆಯುವ ಸಾವಯವ ಪದಾರ್ಥಗಳಿಂದ ಹೈಡ್ರೋಜನ್ ಸಲ್ಫೈಡ್ ಬಿಡುಗಡೆಯಾಗಿ ತೀವ್ರ ದುರ್ವಾಸನೆ ಬೀರುತ್ತದೆ. ಈ ನೀರನ್ನು ಕೃಷಿಗೆ ಬಳಸಿದರೆ ಬೆಳೆಗಳು ಸುಟ್ಟುಹೋಗುತ್ತವೆ, ಮಣ್ಣಿನ ಸೂಕ್ಷ್ಮಜೀವಿ ಜಾಲ ಸಂಪೂರ್ಣ ನಾಶವಾಗಿ ಮಣ್ಣು ಬಂಜರಾಗುತ್ತದೆ. ಹತ್ತಿರದ ಬೋರ್ವೆಲ್/ಬಾವಿಗಳ ನೀರನ್ನು ವಿಷಪೂರಿತಗೊಳಿಸಿ ಕುಡಿಯಲು ಅಥವಾ ಬಳಕೆಗೂ ಅಯೋಗ್ಯಗೊಳಿಸುತ್ತದೆ. ಬಿಓಡಿ (ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಡ್‌) 700 ಮತ್ತು 500 ಮಿಲಿಗ್ರಾಂ ಪ್ರತಿ ಲೀಟರಿಗೆ ಕಂಡುಬಂದಿದೆ. ಇದು ಕುಡಿವ ನೀರಿಗೆ 2 ರಿಂದ 5 ಮಿಲಿಗ್ರಾಂ ಇರಬೇಕು. ಆದರೆ ಕುಡಿಯುವುದಿರಲಿ, ಇಲ್ಲಿನ ನೀರು ಬಳಸಿದರೂ ವಿಷಕಾರಿ.

ಕುಡಿವ ನೀರಿನ ಪ್ರಯೋಗಾಲಯ ವದರಿಯಲ್ಲಿ ಕಂಡಂತೆ, ನೈಟ್ರೇಟ್‌ ಮತ್ತು ಫ್ಲೋರೈಡ್‌ ಅಂಶಗಳು ಕಳೆದೈದು ವರ್ಷಗಳಲ್ಲಿ ಅನುಮತಿ ಮಿತಿಗೆ ಸಮೀಪ ಹಾಗೂ ಕೆಲವೆಡೆ ಮೀರಿರುವುದು ಆತಂಕ ಮೂಡಿಸಿದೆ. ವೃದ್ಧರು, ಶಿಶುಗಳು ಹಾಗೂ ಗರ್ಭಿಣಿಯರಿಗೆ ಇದು ಸಾವಧಾನವಾಗಿ ವಿಷಪ್ರಾಶನದಂತೆ.

ಹೀಗಿರುವಾಗ, ದಿನೇ ದಿನೇ ಹೆಚ್ಚುತ್ತಿರುವ ಇಲ್ಲಿನ ಕಲುಷಿತ ವಾತಾವರಣದ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಜನರ ಬದುಕಿಗೆ ಆಸರೆಯಾಗಬೇಕಾದ ಕೈಗಾರಿಕೆಗಳು, ಜನರ ಜೀವಗಳನ್ನೇ ನುಂಗುತ್ತಿರುವುದು ಆಘಾತಕಾರಿ.

ಮಳೆ ಬಂದ ವೇಳೆ ಸಿಇಟಿಪಿಯಿಂದ ಚರಂಡಿ ಮೂಲಕ ಮತ್ತೇ ತ್ಯಾಜ್ಯ ನೀರು ಹೊರಬಿಡಲಾಗಿದೆ. ಇದು, ಹಳ್ಳಕೊಳ್ಳ ಸೇರಿ ಜನ-ಜಾನುವಾರುಗಳ ಬಲಿ ತೆಗೆಯುತ್ತದೆ. ಇಂತಹ ತ್ಯಾಜ್ಯ ನೀರಿನ ಬಗ್ಗೆ ಪ್ರಯೋಗಾಲಯ ವರದಿಗಳು ಆತಂಕ ಮೂಡಿಸಿವೆ ಎಂದು ಸೈದಾಪುರ ಸಾಮಾಜಿಕ ಹೋರಾಟಗಾರ ವೀರೇಶ ಸಜ್ಜನ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಸಜ್ಜಿತ ಪ್ರಜಾಸೌಧವಿದ್ದರೂ ಜನರಿಗಿಲ್ಲ ಸರ್ಕಾರಿ ಸೇವೆ
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಶಾಸಕ ಅಲ್ಲಂಪ್ರಭು