ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾಗಿದ್ದ ಒಳಮೀಸಲಾತಿಯನ್ನು ಸರ್ಕಾರವು ಜಾರಿಗೆ ತಂದಿರುವುದರ ಸಂತೋಷವನ್ನು ಹಂಚಿಕೊಳ್ಳಲು ಭರಮಸಾಗರದ ಪ್ರಮುಖ ಬೀದಿಗಳಲ್ಲಿ ಸಮುದಾಯಕ್ಕೆ ಸೇರಿದ ಜನರು ಕುಣಿದಾಡಿ ಸಂಭ್ರಮ ಹಂಚಿಕೊಂಡರು.ಬೆಳಗ್ಗೆಯಿಂದ ಭರಮಸಾಗರ ಹೋಬಳಿ ಕೇಂದ್ರದಲ್ಲಿ ಕಿಕ್ಕಿರಿದು ಜನ ಸೇರಿದ್ದು, ಹಳ್ಳಿಗಳಿಂದ ಸಹಸ್ರ ಸಂಖ್ಯೆಯಲ್ಲಿ ಸಮುದಾಯದ ಜನರು ಟ್ರ್ಯಾಕ್ಟರ್, ಮೋಟಾರ್ ಬೈಕು ಮತ್ತಿತರ ವಾಹನಗಳಲ್ಲಿ ಬಂದು ಜಮಾಯಿಸಿದ್ದರು.
ದುರ್ಗಾಂಭ ದೇವಾಲಯದಿಂದ ಎ.ಬಿ.ಟಿ.ತಿಪ್ಪೇಸ್ವಾಮಿ ಕಲ್ಯಾಣ ಮಂಟಪದವರೆಗೆ ಬೃಹತ್ ವಿಜಯೋತ್ಸವ ಮೆರವಣಿಗೆ ಸಾಗಿತು. ನೂರಾರು ಮಹಿಳೆಯರು ಕುಂಬಹೊತ್ತು ಸಂಭ್ರಮಿಸಿದರು. ಗ್ರಾಮಾಂತರ ಪ್ರದೇಶದ ಹಲವು ಕಲಾ ತಂಡಗಳು ಭಾಗಿಯಾಗಿದ್ದರೂ, ತಮಟೆ ತಂಡಗಳು ಜನರನ್ನು ಆಕರ್ಷಿಸಿದವು. ದಾರಿಯುದ್ದಕ್ಕೂ ಸಿದ್ಧರಾಮಯ್ಯ ಮತ್ತು ಹೋರಾಟದ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಜಯಘೋಷ ಹಾಕಲಾಯಿತು.ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ, ಮಾಯಕೊಂಡ ಶಾಸಕ ಬಸವಂತಪ್ಪ, ಮುಖಂಡ ಎಚ್.ಎನ್.ತಿಪ್ಪೇಸ್ವಾಮಿ, ಆರ್.ಕೃಷ್ಣಮೂರ್ತಿ, ನರಸಿಂಹರಾಜು, ತಾಜ್ ಪೀರ್, ದುರ್ಗೇಶ್ ಪೂಜಾರ್, ಹನುಮಂತಪ್ಪ, ಭರಮಸಾಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್, ಗ್ಯಾರಂಜಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಬಿ.ಟಿ ನಿರಂಜನ್ ಭಾಗಿಯಾಗಿದ್ದರು.
ಒಳ ಮೀಸಲಾತಿ 35 ವರ್ಷಗಳ ಹೋರಾಟದ ಫಲಶ್ರುತಿ: ಆಂಜನೇಯ
ಕನ್ನಡಪ್ರಭ ವಾರ್ತೆ ಸಿರಿಗೆರೆಮಾದಿಗ ಸಮುದಾಯಕ್ಕೆ ರಾಜ್ಯ ಸರ್ಕಾರವು ಕಲ್ಪಿಸಿರುವ ಒಳ ಮೀಸಲಾತಿಯು ನಮ್ಮ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತಿರುವ ಫಲವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ತಿಳಿಸಿದರು.
ಭರಮಸಾಗರ ಎ.ಬಿ.ಟಿ.ತಿಪ್ಪೆಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನೆ ಮತ್ತು ವಿಜಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.ಸರ್ವೋಚ್ಛ ನ್ಯಾಯಾಲದ ಐತಿಹಾಸಿಕ ತೀರ್ಪನ್ನು ಗಣನೆಗೆ ತೆಗೆದುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹುದೊಡ್ಡ ಹೆಜ್ಜೆ ಮುಂದಿಟ್ಟು ಒಳಮೀಸಲಾತಿಯನ್ನು ಕಲ್ಪಿಸಿದ್ದಾರೆ. ಅವರು ಸಾಮಾಜಿಕ ನ್ಯಾಯದ ಹರಿಕಾರರಾದ್ದರಿಂದ ಇದು ಸಾಧ್ಯವಾಗಿದೆ. ನಮ್ಮ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೆವು. ಉಳಿದ ಜಾತಿಗಳಿಗೂ ನ್ಯಾಯ ಒದಗಿಸುವ ತೀರ್ಮಾನ ಮಾಡಿ ಎ,ಬಿ ಮತ್ತು ಸಿ ಗುಂಪುಗಳಾಗಿ ವಿಂಗಡಿಸಿದ್ದರಿಂದ ನಮಗೆ ಶೇ.6ರಷ್ಟು ಮೀಸಲಾತಿ ದೊರಕಿದೆ ಎಂದರು.
ಮೀಸಲಾತಿ ಸೌಲಭ್ಯ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅನೇಕರು ಎಸ್ಸಿ ಪಟ್ಟಿಯಲ್ಲಿ ನುಸುಳಿ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ. ಈಗ ಅದಕ್ಕೆ ಕಡಿವಾಣ ಹಾಕಲು ಸರ್ಕಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು. ಸಮುದಾಯದ ನಾಯಕರೆಲ್ಲರೂ ಒಮ್ಮತದಿಂದ ಹೋರಾಟ ಮಾಡಿದ್ದರ ಫಲದಿಂದ ಈಗ ನ್ಯಾಯ ದೊರಕಿದೆ ಎಂದು ಆಂಜನೇಯ ಹೇಳಿದರು.