ಶಿರಹಟ್ಟಿ: ಭಾವೈಕ್ಯತೆಯ ಜಗದ್ಗುರು ಫಕೀರೇಶ್ವರ ಮಠದ ಜಾತ್ರಾಮಹೋತ್ಸವದ ೨ನೇ ದಿನವಾದ ಶುಕ್ರವಾರ ಸಂಭ್ರಮದ ಕಡುಬಿನ ಕಾಳಗ ಜರುಗಿತು.
೧೩ನೇ ಪಟ್ಟಾಧ್ಯಕ್ಷ ಶ್ರೀಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳು ಮಠದ ಸಂಪ್ರದಾಯದಂತೆ ಸಂಜೆ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಅಶ್ವಾರೂಢರಾಗಿ ನೆರೆದಿದ್ದ ಅಪಾರ ಭಕ್ತ ಸಮೂಹಕ್ಕೆ ಬೆಲ್ಲದ ಕಣ್ಣಿ ತೂರುತ್ತಾ ಶ್ರೀಮಠದ ಗದ್ದುಗೆಗೆ ಮೂರು ಸುತ್ತು ಸುತ್ತಿ ನಂತರ ಭಕ್ತರೆಡೆಗೆ ಕಡುಬಿನ ಕಾಳಗ ತೂರಿದರು.
ನಾಲ್ಕು ಮತ್ತು ಐದನೆ ಸುತ್ತಿಗೆ ಮಠದ ರಥಕ್ಕೆ ಸುತ್ತು ಹಾಕಿ ನಂತರ ಅತ್ತಾರ ಮನೆತನದವರು ಸಂಪ್ರದಾಯದಂತೆ ಶ್ರೀಗಳಿಗೆ ಬಣ್ಣ ಎರಚುವುದು ಸಂಪ್ರದಾಯ. ಜಗದ್ಗುರು ಫಕೀರೇಶ್ವರ ಮಠದ ಜಾತ್ರೆ ಆಗಿ ಹುಣ್ಣಿಮೆಯ ಕೊನೆಯ ಜಾತ್ರೆ.ಜಾತ್ರೆ ಸಂಭ್ರಮದ ಎರಡನೇ ದಿನದ ಕಡುಬಿನ ಕಾಳಗದಲ್ಲಿ ಕಿಕ್ಕಿರಿದು ತುಂಗಿದ್ದ ಜನತೆ.ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಂಡುಬರುತ್ತಿತ್ತು. ಒಟ್ಟಾರೆ ತನುಮನ ಪುಳಕಗೊಳ್ಳುವ ಚೇತೋಹಾರಿ ವಾತಾವರಣ ನಿರ್ಮಾಣವಾಗಿತ್ತು. ಕಡುಬಿನ ಕಾಳಗಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ಫಕೀರೇಶ್ವರರ ದರ್ಶನದೊಂದಿಗೆ ಶ್ರೀಗಳ ಆಶೀರ್ವಾದ ಪಡೆದು ಪಾವನರಾದರು.
ಸಹಸ್ರಾರು ಭಕ್ತರು ಶ್ರೀಗಳು ತೂರುವ ಬೆಲ್ಲದ ಕಣ್ಣಿ ಹಿಡಿದು ನಮಸ್ಕರಿಸಿ ಶ್ರೀಗಳಿಂದ ದೊರೆತ ಪ್ರಸಾದವೆಂದು ಪೂಜ್ಯನೀಯ ಭಾವನೆಯಿಂದ ಮನೆಗೆ ಕೊಂಡೊಯ್ದು ತಮ್ಮ ಮಕ್ಕಳಾದಿಯಾಗಿ ಸೇವಿಸುತ್ತಾರೆ. ಈ ಕಡುಬಿನ ಕಾಳಗದಲ್ಲಿ ಮಠದ ಆನೆ, ಕುದುರೆ, ಒಂಟೆ ಭಾಗವಹಿಸುವುದು ಸಂಪ್ರದಾಯ. ಅದರಂತೆ ಡೊಳ್ಳು, ಝಾಂಜ ಮೇಳ, ನಂದಿ ಕೋಲು ಕಡುಬಿನ ಕಾಳಗಕ್ಕೆ ಮೆರಗು ತಂದವು.