ಹೊಸಪೇಟೆ: ಶಂಕರ ಭಗವತ್ಪಾದರ ಉಪದೇಶಗಳಲ್ಲಿ ಅಧ್ಯಾತ್ಮ, ಲೌಕಿಕ ಸಮಸ್ಯೆಗಳಿಗೆ ಪರಿಹಾರ ಇದೆ. ಅವರ ಬೋಧನೆಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಶೃಂಗೇರಿ ಶಾರದಾ ಪೀಠದ 37ನೇ ಪೀಠಾಧಿಪತಿ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ನಗರದ ಚಿಂತಾಮಣಿ ಮಠದಲ್ಲಿ ಗುರುವಾರ ರಾತ್ರಿ ಆಶೀರ್ವಚನ ನೀಡಿದ ಅವರು, ಶಂಕರರ ಚಿಂತನೆಗಳು, ವಿಚಾರಗಳು, ಬೋಧನೆಗಳು ಪರಮ ಶ್ರೇಷ್ಠ. ಅವುಗಳು ಅಧ್ಯಾತ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಲೌಕಿಕ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ಮಾರ್ಗ ತೋರಿಸಿ ಕೊಡುತ್ತದೆ. ಇದನ್ನು ನಾವು ಅರ್ಥ ಮಾಡಿಕೊಂಡರೆ ಜೀವನ ಸುಗಮವಾಗುತ್ತದೆ ಎಂದರು.
ಲೌಕಿಕವಾಗಿ ಅದೆಷ್ಟೋ ಸಮಸ್ಯೆಗಳು ಬರುತ್ತವೆ. ಅವುಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಶಂಕರ ಭಗವತ್ಪಾದರ ಉಪದೇಶಗಳು ನಮಗೆ ನೀಡುತ್ತವೆ ಎಂದರು.ಸಾಧನಾ ಚತುಷ್ಠಯ:
ತಮ್ಮ ಮೂರು ದಿನಗಳ ಹೊಸಪೇಟೆ ಪ್ರವಾಸವನ್ನು ಅತ್ಯಂತ ಸಂಭ್ರಮದಿಂದ ಕೊನೆಗೊಳಿಸುವುದಕ್ಕೆ ಮೊದಲು ವಿಧುಶೇಖರ ಭಾರತಿ ಸ್ವಾಮೀಜಿ ಶುಕ್ರವಾರ ಬೆಳಗ್ಗೆ ನಗರದ ಕೋಟೆಯ ಶಂಕರಲಿಂಗ ದೇವಸ್ಥಾನಕ್ಕೆ, ನ್ಯೂ ಕೃಷ್ಣ ಲೇಔಟ್‌ನ ಗಾಯತ್ರಿ ದೇವಸ್ಥಾನಕ್ಕೆ ಹಾಗೂ ಚಿತ್ತವಾಡ್ಗಿಯ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಗಣಿ ಉದ್ಯಮಿ ಜಯಂತ್ ಪಂತರ್ ಅವರ ನಿವಾಸಕ್ಕೆ ಬಂದು ನಿತ್ಯದ ಧಾರ್ಮಿಕ ವಿಧಿವಿಧಾನ ಪೂರೈಸಿ, ಭಿಕ್ಷೆ ಸ್ವೀಕರಿಸಿದರು.ಬೆಳ್ಳಿ ಕುಂಭ ಸಮರ್ಪಣೆ:
ಹೊಸಪೇಟೆಯ 1008 ಮಹಿಳೆಯರು ನೀಡಿದ ಪೂರ್ಣಕುಂಭ ಸ್ವಾಗತದ ವೇಳೆ ಹೊತ್ತ ಕಳಶದಿಂದ ಸಂಗ್ರಹಿಸಿದ ಪವಿತ್ರ ಹನಿ ಜಲವನ್ನು ಒಳಗೊಂಡ ಬೆಳ್ಳಿ ಕುಂಭವನ್ನು ಜಯಂತ್ ಪಂತರ್ ಅವರ ನಿವಾಸದಲ್ಲಿ ಶ್ರೀಗಳಿಗೆ ನೀಡಲಾಯಿತು.ಹೊಸಪೇಟೆಯ ಸಮಸ್ತ ಜನರ ಒಳಿತಿಗಾಗಿ ಈ ಕುಂಭದ ಜಲವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿ, ಪವಿತ್ರ ಸ್ನಾನದ ಪುಣ್ಯ ಫಲವನ್ನು ನಗರದ ಜನತೆಗೆ ಒದಗಿಸಿಕೊಡಬೇಕು ಎಂದು ಶ್ರೀಗಳಲ್ಲಿ ಪ್ರಾರ್ಥಿಸಲಾಯಿತು.
ಶ್ರೀಗಳು ಬಳಿಕ ತೋರಣಗಲ್‌ಗೆ ತೆರಳಿ ವಿಶೇಷ ವಿಮಾನದಲ್ಲಿ ಪ್ರಯಾಗರಾಜ್‌ನತ್ತ ಪ್ರಯಾಣ ಬೆಳೆಸಿದರು. ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ, ಹಿರಿಯ ನ್ಯಾಯವಾದಿ ಮಾಣಿಕ್ಯ ಪ್ರಭು, ಆರ್.ಬಿ.ಎಸ್.ಎಸ್.ಎನ್ ಸಂಸ್ಥೆಯ ಅಜೇಯ ಶೆರಾಫ್, ಪಂತರ್ ವಿದ್ಯಾಬಾಯಿ, ಜಯಂತ, ಅನಿಲ್ ಜೋಶಿ, ಚಂದ್ರಕಾಂತ ಕಾಮತ್ ಇದ್ದರು.