ಹೊಸಪೇಟೆ: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಹಾಗೂ ಶ್ರೀ ಪಂಪಾಂಬಿಕೆ ದೇವಿ ಫಲಪೂಜಾ (ನಿಶ್ಚಿತಾರ್ಥ) ಮಹೋತ್ಸವ ಸಂಭ್ರಮದಿಂದ ಮಂಗಳವಾರ ಜರುಗಿತು.
ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅರ್ಚಕರು ನಿಶ್ಚಿತಾರ್ಥ ಶಾಸ್ತ್ರ ಪೂರೈಸಿದರು. ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಫಲಪೂಜಾ ಕಾರ್ಯಕ್ರಮದಲ್ಲಿ ದೀಪೋತ್ಸವ ನೆರವೇರಿಸಿದರು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ರಾಜ್ಯದ ದಾವಣಗೆರೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಮಂಗಳೂರು, ಚಿತ್ರದುರ್ಗ, ಉಡುಪಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಫಲಪೂಜಾ ಮಹೋತ್ಸವದ ನಿಮಿತ್ತ ಶ್ರೀ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಬೆಳಗಿದರು. ಹಂಪಿಯಲ್ಲಿ ಭಾರೀ ಚಳಿಯನ್ನು ಲೆಕ್ಕಿಸದೇ ಸಾವಿರಾರು ಭಕ್ತರು ಆಗಮಿಸಿದ್ದರು. ಫಲಪೂಜಾ ಮಹೋತ್ಸವದ ಪರಂಪರೆಯಲ್ಲಿ ಪಾಲ್ಗೊಳ್ಳಲು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಜಾನಪದ ತಜ್ಞರು, ಇತಿಹಾಸ ತಜ್ಞರು ಕೂಡ ಪಾಲ್ಗೊಂಡಿದ್ದರು.