ಹಿಂದೂ-ಮುಸ್ಲಿಂ ಭಕ್ತರಿಂದ ಸಂಭ್ರಮದ ಉರೂಸ್‌ ಆಚರಣೆ

KannadaprabhaNewsNetwork |  
Published : Oct 16, 2024, 12:47 AM IST
ಫೋಟೋ : ೧೫ಎಸ್‌ಎಚ್‌ಟಿ೧ಕೆ ಮಂಗಳವಾರ ಶಿರಹಟ್ಟಿಯ ಹಜರತ್ ಮೆಹಬೂಬ ಸುಬ್ಹಾನಿ ಉರುಸ್ ಪ್ರಯುಕ್ತ ನಡೆದಂತಹ ತವ್ಹಾಫ್‌ನಲ್ಲಿ ದರ್ಗಾ ಎದುರಿಗೆ ಸೇರಿದ ಜನಸ್ತೋಮ. | Kannada Prabha

ಸಾರಾಂಶ

ಶಿರಹಟ್ಟಿ ಪಟ್ಟಣದಲ್ಲಿ ನಡೆದ ಹಜರತ್ ಮೆಹಬೂಬ ಸುಬ್ಹಾನಿ ಉರೂಸ್‌ ನಿಮಿತ್ತ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಂ ಭಕ್ತರು ದರ್ಗಾಕ್ಕೆ ಬಂದು ಸಕ್ಕರೆ ಓದಿಸಿದರು.

ಶಿರಹಟ್ಟಿ: ಪಟ್ಟಣದಲ್ಲಿ ನಡೆದ ಹಜರತ್ ಮೆಹಬೂಬ ಸುಬ್ಹಾನಿ ಉರೂಸ್‌ ನಿಮಿತ್ತ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಂ ಭಕ್ತರು ದರ್ಗಾಕ್ಕೆ ಬಂದು ಸಕ್ಕರೆ ಓದಿಸಿದರು.ಜ. ಫಕೀರೇಶ್ವರರ ಮಹಾಸಂಸ್ಥಾನ ಮಠ ಹಾಗೂ ಹಜರತ್ ಮೆಹೆಬೂಬ ಸುಬ್ಹಾನಿ ದರ್ಗಾ ತನ್ನದೇ ಆದಂತಹ ವೈಶಿಷ್ಟ್ಯ ಹೊಂದಿದೆ. ಹೀಗಾಗಿ ಎರಡೂ ಧಾರ್ಮಿಕ ಸ್ಥಳಗಳಿಗೆ ಇಲ್ಲಿ ಹಿಂದೂ-ಮುಸ್ಲಿಂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಿಶೇಷ.

ಉರೂಸ್‌ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಸಂದಲ್ (ಗಂಧ) ಕಾರ್ಯಕ್ರಮದಲ್ಲಿಯೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸೋಮವಾರ ಬೆಳಗಿನ ಜಾವ ಕೆಳಗೇರಿ ಓಣಿಯ ಗರೀಬ ನವಾಜ್ ದರ್ಗಾದಿಂದ ಆರಂಭವಾದ ಮೆರವಣಿಗೆ ಮೆಹೆಬೂಬ ಸುಬಾನಿ ದರ್ಗಾ ವರೆಗೆ ನಡೆಯಿತು.

ಹಿಂದು-ಮುಸ್ಲಿಂ ಎಂಬ ಬೇಧ-ಭಾವ ಎಣಿಸದೇ ಪಟ್ಟಣ ಸೇರಿದಂತೆ ದೂರದೂರಿನಿಂದ ಆಗಮಿಸುವ ಸಹಸ್ರಾರು ಭಕ್ತಾದಿಗಳು ಹಾಗೂ ಹರಕೆ ಹೊತ್ತವರು ಅವುಗಳ ಈಡೇರಿಕೆಗಾಗಿ ಅಂದು ರಾತ್ರಿ ಒಣಕೊಬ್ಬರಿ, ಎಣ್ಣೆ ಸುಡುವ ಮೂಲಕ ಹರಕೆ ತೀರಿಸುವುದು ಸಂಪ್ರದಾಯವಾಗಿದೆ.

೨ನೇ ದಿನವಾದ ಸೋಮವಾರ ಉರೂಸ್‌ ನಡೆಯಿತು. ಕೊನೆಯ ದಿನ ಮಂಗಳವಾರ ವಿಶೇಷವಾಗಿ ಹಿಂದೂ ಭಕ್ತರು ತಮ್ಮ ಮನೆಯಿಂದ ದರ್ಗಾದ ವರೆಗೂ ದೀಡ್ ನಮಸ್ಕಾರ ಹಾಕುವುದು, ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತು ತಮ್ಮ ಬೇಡಿಕೆ ಈಡೇರಿದ ನಂತರ ತಮ್ಮ ಮಕ್ಕಳ ತೂಕದಷ್ಟು ಸಕ್ಕರೆ ಹಾಗೂ ಬೆಳ್ಳಿಯ ಕುದುರೆ ಅಥವಾ ಕಡಗಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು. ಸಂಭ್ರಮದ ಮೆಹಬೂಬ್‌ ಸುಬಾನಿ ಉರೂಸ್‌

ರೋಣ:

ಪಟ್ಟಣದ ಬಿಇಒ ಕಚೇರಿ ಹತ್ತಿರವಿರುವ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾ ಉರೂಸ್‌ ಸೋಮವಾರ ಸಂಜೆ ಶ್ರದ್ಧಾ ಭಕ್ತಿ,ಯಿಂದ ಅದ್ದೂರಿಯಾಗಿ ಜರುಗಿತು.

ಉರೂಸ್‌ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಸಾಯಿ ನಗರ, ಲಕ್ಷ್ಮೀ ನಗರ, ಶ್ರೀನಗರ ಬಡಾವಣೆ, ಕಲ್ಯಾಣ ನಗರ, ಶಿವಾನಂದ ನಗರ, ಕುರಬಗಲ್ಲಿ ಬಡಾವಣೆ, ಹೊರಪೇಟಿ ಓಣಿ, ಹಕಾರಿಯವರ ಓಣಿ, ಕಂಬಿಯವ ಓಣಿ, ಶಿವಪೇಟಿ ಬಡಾವಣೆ, ಜಗ್ಗಲ ಓಣಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಪಾಲ್ಗೊಂಡದ್ದರು..

ಈ ವೇಳೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಉರೂಸ್, ಜಾತ್ರೆ, ಹಬ್ಬಗಳು ಕೇವಲ ಭಕ್ತಿ, ಸಂಭ್ರಮಗಳಿಗೆ ಸೀಮಿತವಾಗದೇ, ಭಾವೈಕ್ಯತೆ, ಸಾಮರಸ್ಯ ಬೆಸೆಯುವ ಕೊಂಡಿಗಳಾಗಿವೆ ಎಂದರು.

ಗುಲಗಂಜಿ ಮಠದ ಗುರುಪಾದ ಸ್ವಾಮೂಜಿ, ಸುಲೇಮಾನ ಸೈಯದ್ ಶಾವಲಿ ದರ್ಗಾ ಅಜ್ಕನವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪುರಸಭೆ ಸದಸ್ಯ ಮಿಥುನ‌ ಪಾಟೀಲ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಹಜರತ್ ಮೆಹಬೂಬ ಸು‌ಬ್ಹಾನಿ ಯುವ ಸಂಘ ಅಧ್ಯಕ್ಷ ಬಾವಾಸಾಹೇಬ ಆರ್. ಬೆಟಿಗೇರಿ, ಉಪಾಧ್ಯಕ್ಷ ಮಲೀಕ್ ಎಚ್. ಯಲಿಗಾರ, ಯುಸೂಫ್‌ ಇಟಗಿ, ಬಾಬು ಓಲಿ, ಬಸವರಾಜ ಕುರಿ, ರಝಾಕ್‌ ಜಕ್ಕಲಿ, ಫಕ್ರುಸಾಬ ಮೇಸ್ತ್ರಿ, ಸುನೀಲ ಜಾಲಿಹಾಳ, ದಾವಲಸಾಬ ಇಟಗಿ, ಶಾಂತಕುಮಾರ ಕೊಳ್ಳಪ್ಪನವರ, ಮೆಹಬೂಬ ಮುಜಾವರ, ಮೌಲಾಸಾಬ ಹುಂಡೆಕರ, ನಬಿಸಾಬ ಮೂಗ್ನೂರ, ರಾಜೇಸಾಬ ಹುಸೇನ ಬಾವಿ, ರಫೀಕ ಬಾಡಿನ, ಮಾಬುಸಾಬ ರಾಜಖಾನ್, ಇಮಾಮ ಹೊಸಳ್ಳಿ, ಮುತ್ತು ಗೋನಾಳ, ಸುಲೇಮಾನ ಇಟಗಿ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ