ಬಳ್ಳಾರಿ: ಶಾಂತಿ, ಪ್ರೀತಿ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬವನ್ನು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಕ್ರೈಸ್ತ ಸಮುದಾಯದವರು ನಗರದ ವಿವಿಧ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ನೆರೆಹೊರೆಯವರು, ಬಂಧು ಬಳಗದೊಂದಿಗೆ ಜತೆಗೂಡಿ ಹಬ್ಬದ ಊಟ ಸವಿದರು.
ಇಲ್ಲಿನ ವಿದ್ಯಾನಗರದ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳು ದೀಪಾಲಂಕಾರ, ವೈವಿಧ್ಯಮಯ ವಿದ್ಯುತ್ ನಕ್ಷತ್ರಗಳಿಂದ ಕಂಗೊಳಿಸಿದವು. ವಿವಿಧೆಡೆ ಸಾಂತಾಕ್ಲಾಸ್ ವೇಷಧಾರಿಗಳು ಮಕ್ಕಳೊಂದಿಗೆ ಕುಣಿದು ಸಂಭ್ರಮಿಸಿದರು.ಬಳಿಕ ಬಾಲಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಏಸುವಿನ ಜನನ, ಬಾಲ್ಯ, ಬದುಕನ್ನು ತಿಳಿಸುವ ಚಿತ್ರಣ ಸಾರಲಾಯಿತು. ಸಮುದಾಯದವರು ಏಸು ಗೀತೆಗಳನ್ನು ಹಾಡಿದರು. ತಡರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ಪ್ರಮುಖ ಚರ್ಚ್ ಗಳು ಭಕ್ತರಿಂದ ತುಂಬಿ ತುಳಕಿದವು.