ಪದೇಪದೇ ಕೆಡುವ ಶುದ್ಧ ಕುಡಿಯುವ ನೀರಿನ ಘಟಕ

KannadaprabhaNewsNetwork |  
Published : Jul 21, 2025, 01:30 AM IST
1.ಕುದೂರು ಗ್ರಾಮದ ಹಳೇಪೇಟೆ ರಸ್ತೆಯ ಶುದ್ದ ನೀರಿನ ಘಟಕ ಕೆಟ್ಟು ನಿಂತಿರುವುದು. | Kannada Prabha

ಸಾರಾಂಶ

ಕುದೂರು: ಶುದ್ಧ ನೀರಿನ ಘಟಕ ಆರಂಭವಾಗಿ ಒಂದು ವರ್ಷದೊಳಗೆ ಹತ್ತಾರು ಬಾರಿ ರಿಪೇರಿ ಬಂದು ಈಗ ಕೆಲಸ ನಿರ್ವಹಿಸದೆ ಬೀಗ ಜಡಿದು ಕೂತಿದೆ.

ಕುದೂರು: ಶುದ್ಧ ನೀರಿನ ಘಟಕ ಆರಂಭವಾಗಿ ಒಂದು ವರ್ಷದೊಳಗೆ ಹತ್ತಾರು ಬಾರಿ ರಿಪೇರಿ ಬಂದು ಈಗ ಕೆಲಸ ನಿರ್ವಹಿಸದೆ ಬೀಗ ಜಡಿದು ಕೂತಿದೆ.

ಕುದೂರು ಗ್ರಾಮದ ಹಳೇಪೇಟೆ ರಸ್ತೆಯ ಮಸೀದಿ ಬಳಿ ಗ್ರಾಮಪಂಚಾಯ್ತಿ ವತಿಯಿಂದ 4 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಯಿತು. ಇದರಿಂದಾಗಿ ಆ ಬಡಾವಣೆಯ ಜನರೆಲ್ಲರೂ ಶುದ್ಧ ನೀರಿನ ಅನುಕೂಲಕ್ಕೆ ಹರ್ಷಿತರಾಗಿದ್ದರು. ಆದರೆ ತಿಂಗಳಿಗೊಮ್ಮೆ ರಿಪೇರಿ ಬರುತ್ತಿರುವುದರಿಂದ ಹಾಗೂ ಶುದ್ಧೀಕರಣ ಕ್ರಿಯೆ ಸರಿಯಾಗಿ ಆಗುತ್ತಿಲ್ಲದ ಕಾರಣ ಜನರು ಗ್ರಾಪಂ ಮತ್ತು ಕಾಮಗಾರಿ ಮಾಡಿದ ಸದಸ್ಯರ ಬಗ್ಗೆ ಬೇಸರಗೊಂಡಿದ್ದಾರೆ.

ಶುದ್ದೀಕರಣಗೊಳ್ಳುವ ಯಂತ್ರದ ಬಳಿಯ ಪೈಪ್ ವಿಪರೀತ ತೂತುಗಳಾಗಿ ನೀರು ಪೋಲಾಗುತ್ತಿದೆ. ಅದರ ಪಕ್ಕದಲ್ಲೇ ಇರುವ ಎಲೆಕ್ಟ್ರಿಕ್ ಮೋಟರ್‌ಗೆ ನೀರು ಹೋಗಿ ಕೆಡುವ ಸಾಧ್ಯತೆ ಇರುವುದರಿಂದ ಶುದ್ಧೀಕರಣಗೊಳ್ಳುವ ಭಾಗಕ್ಕೆ ಗೋಣಿ ಚೀಲದಿಂದ ಮುಚ್ಚಲಾಗಿದೆ. ಇದರಿಂದಾಗಿ ನೀರು ಶುದ್ಧೀಕರಣಗೊಳ್ಳದೆ ರುಚಿಸದೆ ಸಾಮಾನ್ಯವಾದ ನೀರನ್ನೇ ಕುಡಿಯುತ್ತಿರುವ ಜನರಲ್ಲಿ ಗಂಟಲು ಕೆರೆತ ಆರಂಭವಾಗುತ್ತಿದೆ.

ಕೊಳವೆ ಬಾವಿಯಿಂದ ಶುದ್ಧೀಕರಣ ಘಟಕಕ್ಕೆ ಮೋಟಾರು ಅಳವಡಿಸಲಾಗಿದೆ. ಒಂದು ಗಂಟೆಯಲ್ಲಿ ಶುದ್ಧನೀರು ತುಂಬುವ ಟ್ಯಾಂಕ್‌ಗೆ ಸತತ ಐದು ಗಂಟೆ ಮೋಟಾರು ಓಡಿಸಬೇಕಾಗಿದೆ. ಮತ್ತು ಟ್ಯಾಂಕಿನ ಎರಡರಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇದಕ್ಕೆ ಕುರಿತಂತೆ ಸ್ಥಳೀಯ ಗ್ರಾಮಪಂಚಾಯ್ತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅದನ್ನು ರಿಪೇರಿ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡುವ ವಿಷಯದಲ್ಲಿ ಪಂಚಾಯ್ತಿ ಸಂಪೂರ್ಣ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ.

ಘಟಕವನ್ನು ನೋಡಿಕೊಳ್ಳುವ ವ್ಯಕ್ತಿಯೇ ಜನರಿಗೆ ಅನುಕೂಲವಾಗಲಿ ಎಂದು ಸಣ್ಣಪುಟ್ಟ ರಿಪೇರಿ ಸ್ವಂತ ಖರ್ಚಿನಲ್ಲಿ ಮಾಡುತ್ತಿದ್ದರು. ಆದರೆ ದಿನಾ ಸಾಯೋರಿಗೆ ಅಳೋರ್‍ಯಾರು ಎಂಬಂತೆ ಪದೇಪದೇ ರಿಪೇರಿ ಬರುಲು ಶುರುವಾದಾಗ ಸುಮ್ಮನಾದರು.

ಬಾಕ್ಸ್‌..............

ನಾಣ್ಯ ನುಂಗುವ ಬಾಕ್ಸ್

ನೀರು ಶುದ್ದೀಕರಣಗೊಳ್ಳದೆ ವಿಪರೀತವಾಗಿ ಪೋಲಾದಾಗ ಟ್ಯಾಂಕ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುತ್ತದೆ. ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಇಪ್ಪತ್ತು ಲೀಟರ್ ನೀರಿಗೆ ಐದು ರೂಗಳ ನಾಣ್ಯವನ್ನು ಹಾಕಿದರೆ ಬಾಕ್ಸ್ ನಾಣ್ಯ ನುಂಗಿ ಮೌನವಾಗುತ್ತದೆಯೇ ಹೊರತು ನೀರು ಮಾತ್ರ ಹೊರಗೆ ಬರುವುದೇ ಇಲ್ಲ. ಜನರು ಇದೆಂತಹ ಘಟಕವಪ್ಪಾ, ಬರೀ ನಾಣ್ಯ ನುಂಗುತ್ತದೆಯೇ ಹೊರತು ನೀರು ಮಾತ್ರ ಬರುವುದಿಲ್ಲ ಎಂದು ಪಂಚಾಯ್ತಿಗೆ ಹಿಡಿಶಾಪ ಹಾಕಿ ಹೋಗುತ್ತಾರೆ. ಇದೇ ರೀತಿ ಅದೇ ಮಾರ್ಗದ ಕಾಳಿಕಾಂಬ ದೇವಾಲಯದ ಬಳಿಯಿರುವ ಶುದ್ದ ನೀರಿನ ಘಟಕದಲ್ಲೂ ನಾಣ್ಯಗಳನ್ನು ನುಂಗುತ್ತದೆ.

ಬಾಕ್ಸ್‌............

ಗ್ಯಾರಂಟಿ ಮಾತು ಉಳಿಸಿಕೊಳ್ಳುತ್ತಿಲ್ಲ

ಶುದ್ದ ನೀರಿನ ಯಂತ್ರಗಳನ್ನು ಅಳವಡಿಸಿಕೊಟ್ಟಿರುವ ಕಂಪನಿಯವರು ರಿಪೇರಿ ಬಂದರೆ ಅದಕ್ಕೆ ಗ್ಯಾರಂಟಿ ಕೊಟ್ಟು ಅದನ್ನು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಯಂತ್ರ ಕೆಟ್ಟಿದೆ ಎಂದು ಸಾಕಷ್ಟು ಬಾರಿ ಪೋನ್ ಮಾಡಿದರು ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಅವರುಗಳ ಮೇಲೆ ಪಂಚಾಯ್ತಿ ಆಡಳಿತ ಕೂಡಾ ಖಡಕ್ ಎಚ್ಚರಿಕೆ ಕೊಟ್ಟು ಕಾನೂನಿನ ಇಕ್ಕಳಕ್ಕೆ ಸಿಲುಕಿಸುತ್ತಿಲ್ಲ. ಶುದ್ದ ನೀರಿನ ಘಟಕದ ಕಾಮಾಗಾರಿ ಜವಾಬ್ದಾರಿ ನೋಡಿಕೊಂಡ ಗ್ರಾಮಪಂಚಾಯತಿ ಸದಸ್ಯರು ಕೂಡಾ ಘಟಕದ ಕಡೆಗೆ ಗಮನ ಕೊಡುತ್ತಿಲ್ಲ. ಘಟಕಕ್ಕೆ ಮಂಜೂರಾದ ಹಣಕ್ಕೆ ಉತ್ತಮ ಗುಣಮಟ್ಟದ ಯಂತ್ರಗಳನ್ನು ನೀಡಿದ್ದಾರಾ? ಹಾಗೊಂದು ವೇಳೆ ನೀಡಿದ್ದೇ ಆದರೆ ಇಷ್ಟು ಬಾರಿ ರಿಪೇರಿ ಯಾಕಾದರೂ ಬರುತ್ತಿದೆ.? ಕಳಪೆ ವಸ್ತುಗಳಿಂದ ಘಟಕ ನಿರ್ಮಾಣವಾಗಿದ್ದರೆ ಅದಕ್ಕೆ ಮಂಜೂರಾದ ಹಣ ಗುಳುಂ ಮಾಡಿದ್ದಾದರೂ ಯಾರು? ಈ ಪ್ರಶ್ನೆಗಳಿಗೆ ಕುದೂರು ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉತ್ತರಿಸಬೇಕಾಗಿದೆ.

20ಕೆಆರ್ ಎಂಎನ್ 1,2.ಜೆಪಿಜಿ

1.ಕುದೂರು ಗ್ರಾಮದ ಹಳೇಪೇಟೆ ರಸ್ತೆಯ ಶುದ್ದ ನೀರಿನ ಘಟಕ ಕೆಟ್ಟು ನಿಂತಿರುವುದು.

2.ನೀರು ಶುದ್ದೀಕರಣದ ಪ್ರಕ್ರಿಯೆ ಆಗುವ ಯಂತ್ರದ ಭಾಗದಲ್ಲಿ ಹತ್ತಾರು ತೂತುಗಳಾಗಿರುವ ಕಾರಣ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ಗೋಣೀಚೀಲ ಹಾಕಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ