ಶುದ್ಧ ಪರಿಸರವೇ ಆರೋಗ್ಯಕರ ಬದುಕಿನ ಮೂಲಾಧಾರ: ಡಾ.ಡಿ.ವಿ. ಪರಮಶಿವಮೂರ್ತಿ

KannadaprabhaNewsNetwork |  
Published : Jun 09, 2026, 02:30 AM IST
ಫೋಟೋವಿವರ-(8ಎಚ್‌ಪಿಟಿ4)  ಹಂಪಿ ಕನ್ನಡ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು | Kannada Prabha

ಸಾರಾಂಶ

ಮನುಷ್ಯನು ತಾಯಿಯ ಮಡಿಲಲ್ಲಿ ಜನಿಸಿದರೂ ಅವನ ಬದುಕು ಮತ್ತು ಬೆಳವಣಿಗೆ ಪರಿಸರದ ಮಡಿಲಲ್ಲಿಯೇ ರೂಪುಗೊಳ್ಳುತ್ತದೆ.

ಹೊಸಪೇಟೆ: ಪಶ್ಚಿಮ ಘಟ್ಟಗಳು ಕರ್ನಾಟಕದ ಜೀವನಾಡಿಗಳಾಗಿದ್ದು, ಅವು ನಾಶವಾದರೆ ರಾಜ್ಯವು ತೀವ್ರ ಮಳೆ ಕೊರತೆಯ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮನುಷ್ಯನು ತಾಯಿಯ ಮಡಿಲಲ್ಲಿ ಜನಿಸಿದರೂ ಅವನ ಬದುಕು ಮತ್ತು ಬೆಳವಣಿಗೆ ಪರಿಸರದ ಮಡಿಲಲ್ಲಿಯೇ ರೂಪುಗೊಳ್ಳುತ್ತದೆ. ಪರಿಸರವೇ ಬದುಕಿನ ಮೌಲ್ಯಗಳನ್ನು ಕಲಿಸುತ್ತದೆ. ಆದರೆ ತನ್ನ ಬುದ್ಧಿಶಕ್ತಿಯ ಅಹಂಕಾರದಿಂದ ಮನುಷ್ಯನು ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನಾವು ಪರಿಸರವನ್ನು ಕೇವಲ ಪ್ರೀತಿಸುವುದಷ್ಟೇ ಅಲ್ಲ, ಅದರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪ್ರಾಣಿ-ಪಕ್ಷಿಗಳು ಹಾಗೂ ಇತರ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಕಲಿಯಬೇಕಾಗಿದೆ. ಶುದ್ಧ ಮತ್ತು ಆರೋಗ್ಯಕರ ಪರಿಸರವು ಮಾನವನ ಆರೋಗ್ಯ, ನೆಮ್ಮದಿ ಮತ್ತು ಸುಖಮಯ ಬದುಕಿನ ಮೂಲಾಧಾರವಾಗಿದೆ ಎಂದು ಹೇಳಿದರು.

ಮರವನ್ನು ಕಡಿಯುವುದು ಸುಲಭ, ಆದರೆ ಅದನ್ನು ಬೆಳೆಸಿ ಪೋಷಿಸುವುದು ಅತ್ಯಂತ ಕಷ್ಟದ ಕೆಲಸ. ಪ್ರತಿಯೊಬ್ಬರು ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಸ್.ಎಂ. ಮುತ್ತಯ್ಯ ಮಾತನಾಡಿ, ಪರಿಸರ ದಿನದಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಚರಿಸಲಾಗುತ್ತಿದ್ದರೂ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಮಾನವನ ಆರೋಗ್ಯ ಮತ್ತು ಪರಿಸರದ ನಡುವೆ ಅವಿನಾಭಾವ ಸಂಬಂಧವಿದೆ. ಆರೋಗ್ಯಕರ ಬದುಕಿಗೆ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಗಿಡಗಳನ್ನು ನೆಡುವುದಷ್ಟೇ ಸಾಕಾಗುವುದಿಲ್ಲ, ಅವು ಬೆಳೆದು ಮರಗಳಾಗುವವರೆಗೆ ಅವುಗಳ ಸಂರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ವಿಶ್ವವಿದ್ಯಾಲಯದ ಆರಂಭಿಕ ದಿನಗಳಲ್ಲಿ ಉದ್ಯೋಗಿಗಳು ಒಂದೊಂದು ಗಿಡವನ್ನು ನೆಟ್ಟು ಪೋಷಿಸಿದ್ದರಿಂದ ಇಂದು ವಿಶ್ವವಿದ್ಯಾಲಯದ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಹೇಳಿದರು.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ನೀರನ್ನು ಮಿತವಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಮಯೂರವರ್ಮನ ಕಾಲದಿಂದ ವಿಜಯನಗರ ಅರಸರ ಅವಧಿವರೆಗೂ ನೆಡುತೋಪುಗಳನ್ನು ನಿರ್ಮಿಸುವುದರ ಜೊತೆಗೆ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆ ಪರಂಪರೆಯನ್ನು ಮುಂದುವರಿಸಿಕೊಂಡು ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಪರಿಸರ ಪ್ರೇಮಿ ಪಂಪಯ್ಯಸ್ವಾಮಿ ಮಳೀಮಠ ಮಾತನಾಡಿ, ಹಂಪಿ ಕನ್ನಡ ವಿವಿ ಆವರಣವು ಜೀವ ವೈವಿಧ್ಯದ ತಾಣವಾಗಿದೆ. ಇಲ್ಲಿ ವಿವಿಧ ಬಗೆಯ ಪ್ರಾಣಿ-ಪಕ್ಷಿಗಳು ಹಾಗೂ ಸುಮಾರು 65ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳು ಕಂಡುಬರುತ್ತವೆ. ಆವರಣದಲ್ಲಿ ಕಂಡುಬರುವ ಪ್ರಾಣಿಗಳ ಹೆಜ್ಜೆ ಗುರುತುಗಳನ್ನು ನೋಡಿ ಯಾವ ಪ್ರಾಣಿ ಸಂಚರಿಸಿದೆ ಎಂಬುದನ್ನು ಗುರುತಿಸುವ ಪರಿಣತಿ ಹೊಂದಿರುವ ಸ್ಥಳೀಯರು ಇಲ್ಲಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಡೀನರು, ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ತೋಟಗಾರಿಕೆ ವಿಭಾಗದ ಸಿಬ್ಬಂದಿ ಇದ್ದರು.

ಸಹಾಯಕ ತೋಟಗಾರಿಕಾ ಅಧಿಕಾರಿ ಬೀರಪ್ಪ ಸ್ವಾಗತಿಸಿದರು. ಉಪಕುಲಸಚಿವ ಎಂ.ಎಂ. ಶಿವಪ್ರಕಾಶ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ರಕ್ಷಣೆ ಕರ್ತವ್ಯವಾಗಲಿ: ನ್ಯಾ. ಸುಜಾತಾ
ಹೆಣ್ಣುಮಕ್ಕಳು ಕರಾಟೆ ಕಲಿಯಲಿ: ದೇವಿದಾಸ ಮೊಗೇರ