ಯಲಬುರ್ಗಾ:
ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿ ಇಲ್ಲದ ಗ್ರಾಪಂ ಹೆಸರನ್ನು ಗುರುತಿಸಿ, ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳಿಸಬೇಕು ಎಂದರು.
ಇದಕ್ಕೆ ಸಹಕಾರ ಸಂಘಗಳ ಅಧಿಕಾರಿ ಪ್ರತಿಕ್ರಿಯಿಸಿ, ತಾಲೂಕಿನ ಬಳೂಟಗಿ, ಹಿರೇಮ್ಯಾಗೇರಿ, ಮಾಟಲದಿನ್ನಿ, ತುಮ್ಮರಗುದ್ದಿ ಹಾಗೂ ಬೋದೂರು ಗ್ರಾಪಂ ವ್ಯಾಪ್ತಿಯಲ್ಲಿ ಸೊಸೈಟಿಗಳು ಇಲ್ಲ. ಈ ಕುರಿತು ಈಗಾಗಲೇ ಗ್ರಾಮಸಭೆಯಲ್ಲಿ ಚರ್ಚಿಸಿದ್ದು ಪ್ರಸ್ತಾವನೆ ಕಳಿಸಲಾಗುವುದು ಎಂದರು.ಸರ್ಕಾರಿ ಶಾಲಾ ಮೈದಾನದಲ್ಲಿ ಖಾಲಿ ಜಾಗ ಇದ್ದರೆ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಎಸ್‌ಡಿಎಂಸಿ ಅವರ ಅಭಿಪ್ರಾಯಪಡೆಯಬೇಕು ಎನ್ನುವ ನಿಯಮವಿಲ್ಲವೆಂದು ಶಿಕ್ಷಣ ಇಲಾಖೆ ಅಧಿಕಾರಿ ವೀರಭದ್ರಪ್ಪ ಅಂಗಡಿಗೆ ತೊದಲಬಾಗಿ ನಿರ್ದೇಶಿಸಿದರು.
ಶಾಲೆ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮುಖ್ಯಶಿಕ್ಷಕರು, ಗ್ರಾಪಂ ಪಿಡಿಒ ಉಪಾಹಾರ ಸವಿದು ನೋಡಿದ ಬಳಿಕ ವಿದ್ಯಾರ್ಥಿಗಳಿಗೆ ಉಣಬಡಿಸಬೇಕು. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತಾಪಂ ಇಒ ಸಂತೋಷ ಪಾಟೀಲ್ ಅವರು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿಗೆ ತಿಳಿಸಿದರು. ಹಾಗೆಯೇ ವಾರಕ್ಕೊಮ್ಮೆ ಮಕ್ಕಳಿಗೆ ಪೌಷ್ಟಿಕ ಆಹಾರ ಭಾಗವಾಗಿ ದಾನಿಗಳಿಂದ ಮೊಳಕೆಕಾಳು ವಿತರಿಸುವುದನ್ನು ಮುಂದುವರಿಸಬೇಕೆಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ. ದಾನಿ ಅವರಿಗೆ ಇಒ ಸೂಚಿಸಿದರು.
ಕೃಷಿ ಇಲಾಖೆಯಿಂದ ರೈತರಿಗೆ ಯಾವುದೇ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ಅವರಿಗೆ ಇಒ ನಿರ್ದೇಶಿಸಿದರು. ಶಿಕ್ಷಣ ಇಲಾಖೆ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯವರು ವಿವಿಧ ಯೋಜನೆಯಡಿ ಸಕಾಲಕ್ಕೆ ನೆಡುತೋಪು ನೆಡಬೇಕು ಎಂದು ಆಯಾ ಇಲಾಖೆ ಅಧಿಕಾರಿಗಳಿಗೆ ಇಒ ಸೂಚಿಸಿದರು.
ನೀರಿನ ಸಮಸ್ಯೆ ಪರಿಹರಿಸಿ:ಗಾಣಧಾಳ ಗ್ರಾಮದ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ನಿಲಯದ ಹತ್ತಿರ ಸ್ಮಶಾನವಿದ್ದು, ಅದನ್ನು ಸ್ಥಳಾಂತರಿಸಬೇಕು. ನಿಲಯಕ್ಕೆ ಕಾಂಪೌಂಡ್ ನಿರ್ಮಿಸಬೇಕು. ಪಟ್ಟಣದ ಪದವಿ ಕಾಲೇಜಿನಲ್ಲಿರುವ ವಸತಿ ನಿಲಯದಲ್ಲಿ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಸಮಾಜ ಕಲ್ಯಾಣ ಅಧಿಕಾರಿ ಶಶಿಧರ ಸಕ್ರಿ ಸಭೆಯ ಗಮನಕ್ಕೆ ತಂದರು. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಇಒ ಭರವಸೆ ನೀಡಿದರು.