ಚಾ.ನಗರ ದಸರಾಗೆ ವರ್ಣರಂಜಿತ ತೆರೆ

KannadaprabhaNewsNetwork |  
Published : Oct 22, 2026, 01:45 AM IST
  ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು | Kannada Prabha

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಹಾಗೂ ಬಹಳ ವೈಭವಯುತವಾಗಿ ನಡೆದ ಚಾಮರಾಜನಗರ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರದಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಹಾಗೂ ಬಹಳ ವೈಭವಯುತವಾಗಿ ನಡೆದ ಚಾಮರಾಜನಗರ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು.

ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದಲ್ಲಿ ಈ ಬಾರಿ ವಿಶಿಷ್ಟ, ವಿಭಿನ್ನ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರೈತ ದಸರಾ, ಮಹಿಳಾ ದಸರಾ, ಶ್ವಾನ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಯುವ ಸಂಭ್ರಮ, ಫಲಪುಷ್ಪ ಪ್ರದರ್ಶನ, ಚಿತ್ರಸಂತೆ, ಆಕರ್ಷಕ ಕಲಾತಂಡಗಳ ಮೆರವಣಿಗೆ, ಎತ್ತಿನ ಗಾಡಿಗಳ ಮೆರವಣಿಗೆ, ವಸ್ತುಪ್ರದರ್ಶನ ಮಳಿಗೆಗಳು, ಸ್ತಬ್ದಚಿತ್ರಗಳು, ಆಹಾರಮೇಳ, ಹೆಲಿ ರೈಡ್, ಸಂಗೀತ, ನಾಟಕ, ಕವಿಗೋಷ್ಠಿ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಶ್ವಾನ ಪ್ರದರ್ಶನ ಹಾಗೂ ಹೆಲಿಕಾಪ್ಟರ್ ರೈಡಿಂಗ್ ಈ ಬಾರಿಯ ಎರಡು ಮೊದಲುಗಳಿಗೆ ಚಾಮರಾಜನಗರ ದಸರಾ ಮಹೋತ್ಸವ ವೇದಿಕೆಯಾಗಿ ಅತ್ಯಂತ ಯಶಸ್ವಿ ಆಯಿತು.

ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಈ ಬಾರಿಯ ದಸರಾ ಉತ್ಸವವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತರಾತುರಿಯಲ್ಲಿ ಸಿದ್ದಗೊಳಿಸಿದ್ದರೂ ಕಾರ್ಯಕ್ರಮಗಳು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿದೆ ಎಂದರು.

ದಸರಾ ಮಹೋತ್ಸವದಲ್ಲಿ ೭೦೦ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿವೆ. ಕಾರ್ಯಕ್ರಮಗಳ ನಿರ್ವಹಣೆಗಾಗಿ ಜಿಲ್ಲಾಡಳಿತ, ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆಗಳು ಶ್ರಮ ವಹಿಸಿವೆ. ದಸರಾ ಯಶಸ್ವಿಗಾಗಿ ಜಿಲ್ಲಾ ಜನತೆಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಈ ಬಾರಿಯ ಚಾಮರಾಜನಗರ ದಸರಾ ಮಹೋತ್ಸವ ಇತಿಹಾಸದ ಪುಟ ಸೇರಿದೆ. ಅದ್ದೂರಿಯಾಗಿ ನಡೆದಿದೆ. ವೈವಿಧ್ಯಮಯ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿವೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ದಸರಾ ಹಬ್ಬ ಮಾತ್ರವಲ್ಲ, ಅದು ಕಲೆ, ಸಂಸ್ಕೃತಿಗಳ ಪ್ರತೀಕವಾಗಿದೆ. ಕಳೆದ ಮೂರು ದಿನಗಳ ಕಾಲ ದಸರಾ ನಗರದಲ್ಲಿ ಯಶಸ್ಸು ಕಂಡಿದೆ. ಚಾಮರಾಜನಗರ ಜಾನಪದ ಕಲೆಗಳ ತವರೂರು ಎಂಬುದನ್ನು ಸಾಬೀತು ಮಾಡಿದೆ. ದಸರಾ ಉತ್ಸವವನ್ನು ಪ್ರತಿವರ್ಷ ಆಚರಿಸಬೇಕು ಎಂದ ಅವರು ದಸರಾ ಆಚರಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ ಇತರರು ಸಮಾರೋಪ ಸಮಾರಂಭದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ್ಷೋಧ್ಘಾರದೊಂದಿಗೆ ನಡೆದ ಅಶ್ವವಾಹನೋತ್ಸವದ ಜಂಬೂಸವಾರಿ
ಅ.23ರಂದು ಗಣಂಗೂರು ಟೋಲ್‍ ಬಂದ್: ರೈತ ಸಂಘ ತೀರ್ಮಾನ