ಸಿದ್ಧಾರೂಢರ ಮಠದ ಆವರಣದಲ್ಲಿ ಅರಳಿದ ಬಣ್ಣಬಣ್ಣದ ಚಿತ್ತಾರ

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಇಲ್ಲಿನ ಶ್ರೀ ಸಿದ್ಧಾರೂಢರ ಮಠದಲ್ಲಿ ಮಂಗಳವಾರ ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಚನ್ನಬಸಪ್ಪ ನೆಗಳೂರ ಕುಟುಂಬ ನಾಡಿನ ಕಲೆ, ಸಂಸ್ಕೃತಿ ಸಾರುವ ಚಿತ್ರ ಬಿಡಿಸುವ ಮೂಲಕ ಜನರಲ್ಲಿ ಸಂಸ್ಕೃತಿಯ ಮೆರುಗು ತೋರಿಸುವ ಕಾರ್ಯ ಕೈಗೊಂಡಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿನ ಶ್ರೀ ಸಿದ್ಧಾರೂಢರ ಮಠದಲ್ಲಿ ಮಂಗಳವಾರ ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಚನ್ನಬಸಪ್ಪ ನೆಗಳೂರ ಕುಟುಂಬ ನಾಡಿನ ಕಲೆ, ಸಂಸ್ಕೃತಿ ಸಾರುವ ಚಿತ್ರ ಬಿಡಿಸುವ ಮೂಲಕ ಜನರಲ್ಲಿ ಸಂಸ್ಕೃತಿಯ ಮೆರುಗು ತೋರಿಸುವ ಕಾರ್ಯ ಕೈಗೊಂಡಿದ್ದಾರೆ.

ಇಲ್ಲಿನ ಸಿದ್ಧಾರೂಢರಿಗೆ ಅಸಂಖ್ಯಾತ ಭಕ್ತರಿದ್ದಾರೆ. ನಿತ್ಯವೂ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸದ್ಗುರುಗಳ ದರ್ಶನ ಪಡೆಯುತ್ತಾರೆ. ಇನ್ನು ಜಾತ್ರೆ, ಕಾರ್ತಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತರು ಸೇರುವುದು ಸಾಮಾನ್ಯ. ಹೀಗಾಗಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಚೆನ್ನಬಸಪ್ಪ ನೆಗಳೂರ ಎಂಬುವವರು ಕಳೆದ 12 ದಿನಗಳಿಂದ ಶ್ರೀಮಠದಲ್ಲಿಯೇ ವಾಸ್ತವ್ಯ ಹೂಡಿ ಮಠದ ಆವರಣದಲ್ಲಿ ನಮ್ಮ ಕಲೆ, ಸಂಸ್ಕೃತಿಯ ಕುರಿತ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸುವ ಮೂಲಕ ಸಿದ್ಧಾರೂಢರ ಭಕ್ತರ ಮೆಚ್ಚುಗೆಗೆ ಕಾರಣವಾಗಿದ್ದಾರೆ.

ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಸಂಕಲ್ಪದೊಂದಿಗೆ ಶ್ರೀಮಠದ ಆವರಣದಲ್ಲಿ ತಂದೆ-ತಾಯಿ ಹಾಗೂ ಮಕ್ಕಳನ್ನು ಹೊಂದಿದ ಭಾರತೀಯ ಸಂಸ್ಕೃತಿ ಸಾರುವ ಕುಟುಂಬ, ಬಗೆ ಬಗೆಯ ಚಿತ್ತಾರಗಳು, ಪೂಜಾ ಸಾಮಗ್ರಿಗಳನ್ನು ಹಿಡಿದು ಶ್ರೀಮಠಕ್ಕೆ ಬರುತ್ತಿರುವ ರೈತ, ತ್ರೀಡಿ ರಸ್ತೆಗಳು, ಈಚೆಗೆ ಮರಣವನ್ನಪ್ಪಿದ ಅರ್ಜುನ ಹೆಸರಿನ ಆನೆ, ಹಣತೆ ಹಿಡಿದು ಮಠಕ್ಕೆ ಸ್ವಾಗತಿಸುವ ಪುಟ್ಟ ಪೋರಿ, ಬಗೆಬಗೆಯ ಹಣತೆಗಳ ಚಿತ್ರಗಳನ್ನು ಮಠದ ಆವರಣದಲ್ಲಿ ಚಿತ್ರಿಸಲಾಗಿದೆ.

ಎಲ್ಲ ಅಜ್ಜನ ಭಕ್ತಿಗಾಗಿ:

ಚೆನ್ನಬಸಪ್ಪ ನೆಗಳೂರ ಅವರು ಕಳೆದ 15 ವರ್ಷಗಳಿಂದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಪ್ರತಿವರ್ಷ ಒಂದೊಂದು ಧ್ಯೇಯವಾಕ್ಯದಡಿ ಚಿತ್ರ ಬಿಡಿಸುತ್ತಾ ಬಂದಿದ್ದಾರೆ. ಚಿತ್ರಬಿಡಿಸಲು ಬೇಕಾದ ಬಣ್ಣವನ್ನು ಶ್ರೀಮಠದಿಂದ ಹಾಗೂ ಗ್ರಾಮದ ಭಕ್ತರಿಂದ ಪ್ರತಿವರ್ಷ ಸಂಗ್ರಹಿಸುತ್ತಾರೆ. ಯಾವುದೇ ವೇತನ ಪಡೆಯದೇ ಇಡೀ ಕುಟುಂಬ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ 12 ದಿನಗಳಿಂದ ಮಠದಲ್ಲಿಯೇ ತಂಗಿರುವ ಕುಟುಂಬ ಈಗಾಗಲೇ ಚಿತ್ರಬಿಡಿಸುವ ಕಾರ್ಯ ಪೂರ್ಣಗೊಳಿಸಿದೆ. ಮಂಗಳವಾರ ಬೆಳಗ್ಗೆಯಿಂದ ಸಂಜೆಯ ವರೆಗೂ ಲಕ್ಷದೀಪೋತ್ಸವಕ್ಕೆ ಬೇಕಾದ ಹಣತೆಗಳ ಸಿದ್ಧತಾ ಕಾರ್ಯದಲ್ಲಿ ನಿರತವಾಗಿದೆ.

ಕಳೆದ 5-6 ವರ್ಷಗಳಿಂದ ನಾನು ನೋಡುತ್ತಿದ್ದೇನೆ. ಪ್ರತಿವರ್ಷವೂ ಚೆನ್ನಬಸಪ್ಪ ಕುಟುಂಬ ಸಿದ್ಧಾರೂಢರ ಮಠದ ಲಕ್ಷದೀಪೋತ್ಸವ ಕಾರ್ಯಕ್ರಮದ ಪೂರ್ವದಲ್ಲಿ ಬಂದು ಬಗೆಬಗೆಯ ಚಿತ್ರಬಿಡಿಸುವ ಮೂಲಕ ಸೇವಾ ಕಾರ್ಯ ಕೈಗೊಳ್ಳುತ್ತಿರುವುದು ಅಭಿನಂದನಾರ್ಹ ಎನ್ನುತ್ತಾರೆ ಶ್ರೀಮಠದ ಭಕ್ತೆ ರೇಖಾ ಹರ್ಲಾಪುರ.

Share this article