ಕುಷ್ಟಗಿ: ಪಟ್ಟಣದಲ್ಲಿ ಶರನ್ನವರಾತ್ರಿ ಉತ್ಸವದ ಸಂಭ್ರಮ ಮನೆಮಾಡಿದ್ದು, ದೇವಸ್ಥಾನಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರು ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಆರ್ಯವೈಶ್ಯ ಸಮಾಜದ ವತಿಯಿಂದ ಆಯೋಜಿಸಿರುವ ಉತ್ಸವದಲ್ಲಿ ವೆಂಕಟರಮಣ ದೇವರಿಗೆ ನಂದಾದೀಪ, ಪಂಚಾಮೃತ ಅಭಿಷೇಕ, ತೊಟ್ಟಿಲು ಸೇವೆ, ಪಲ್ಲಕ್ಕಿ ಸೇವೆ, ಭಜನಾ ಸೇವೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಾಜದ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ನವದುರ್ಗೆಯರಂತೆ ವೇಷಭೂಷಣ ಧರಿಸಿ ನೀಡುವ ನರ್ತನ, ಜಾನಪದ ನೃತ್ಯ ಹಾಗೂ ಪೌರಾಣಿಕ ಪ್ರಸಂಗಗಳನ್ನು ಆಧರಿಸಿದ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಗಿರಿಜಾ ಕಲ್ಯಾಣ ಕಾರ್ಯಕ್ರಮ, ಮಕ್ಕಳ ಭರತನಾಟ್ಯ, ಕೋಲಾಟ ಹಾಗೂ ಕನಕಧಾರಾ ಸ್ತೋತ್ರದ ನೃತ್ಯರೂಪಕ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡುತ್ತಿವೆ.ರಾಜ್ಯದ ವಿವಿಧ ಭಾಗಗಳ ಉಡುಗೆ-ತೊಡುಗೆಗಳ ಪ್ರದರ್ಶನ, ಹಳೆಯ ಸಂಪ್ರದಾಯದ ವಸ್ತ್ರವಿನ್ಯಾಸ ಹಾಗೂ ಮೈಸೂರು ಸಿಲ್ಕ್ ಸೀರೆಗಳ ಸೊಬಗು ಕಾರ್ಯಕ್ರಮದ ವಿಶೇಷ ಆಕರ್ಷಣೆಗಳಾಗಿವೆ. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ಯುವಜನ ಸಂಘದವರಿಂದ ಕಿರು ನಾಟಕ, ಸಿನಿಮಾ ಹಾಡುಗಳನ್ನು ಆಧರಿಸಿದ ಪಾತ್ರಾಭಿನಯ ಹಾಗೂ ಹಾಸ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಸಮಾಜದ ಸದಸ್ಯರಿಂದ ಸಾಮೂಹಿಕ ದಾಂಡಿಯಾ ನೃತ್ಯವೂ ನಡೆಯುತ್ತಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕುಷ್ಟಗಿಯ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಆರು ವರ್ಷಗಳಿಂದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಜಾನಪದ, ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಕುಷ್ಟಗಿಯ ಶಾರದಾ ಶೆಟ್ಟರ್ ಹೇಳಿದರು.