ಅಬ್ಬರದ ಧ್ವನಿ ವರ್ಧಕಗಳ ಬಳಕೆಗೆ ಸ್ವಯಂ ನಿಯಂತ್ರಣ ಹೇರಲು ಒಮ್ಮತದ ನಿರ್ಧಾರ

KannadaprabhaNewsNetwork | Published : Sep 29, 2024 1:51 AM

ಸಾರಾಂಶ

ದಸರಾ ಜನೋತ್ಸವದ ದಶ ಮಂಟಪಗಳ ಶೋಭಾಯಾತ್ರೆಯಲ್ಲಿ ಅಬ್ಬರದ ಧ್ವನಿವರ್ಧಕ ಬಳಕೆಗೆ ಸ್ವಯಂ ನಿಯಂತ್ರಣ ಹೇರಿಕೊಳ್ಳಲು ದಶ ಮಂಟಪ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ದಶ ಮಂಟಪಗಳ ಶೋಭಾಯಾತ್ರೆಯಲ್ಲಿ ಅಬ್ಬರದ ಧ್ವನಿ ವರ್ಧಕಗಳ ಬಳಕೆಗೆ ಸ್ವಯಂ ನಿಯಂತ್ರಣ ಹೇರಿಕೊಳ್ಳಲು ದಶ ಮಂಟಪ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಸಭಾಂಗಣದಲ್ಲಿ ದಶ ಮಂಟಪ ಸಮಿತಿ ಅಧ್ಯಕ್ಷ ಜಿ.ಕೆ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲ 10 ಮಂಟಪ ಸಮಿತಿಗಳ ಅಧ್ಯಕ್ಷರು ಮತ್ತು ಸಮಿತಿ ಪದಾಧಿಕಾರಿಗಳು ಪಾಲ್ಗೊಂಡು ಈ ನಿರ್ಧಾರ ಕೈಗೊಂಡರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಶ ಮಂಟಪ ಸಮಿತಿ ಅಧ್ಯಕ್ಷ ಜಿ.ಕೆ. ಜಗದೀಶ್, ಕಳೆದ ಬಾರಿ ದಸರಾ ಉತ್ಸವದ ವೇಳೆ ಡಿ.ಜೆ. ಧ್ವನಿವರ್ಧಕ ಬಳಸಿದ ಪರಿಣಾಮ ದಶ ಮಂಟಪ ಸಮಿತಿಗಳು ಕಾನೂನು ಕ್ರಮ ಎದುರಿಸುವಂತಾಯಿತು. ಈ ಬಾರಿ ಇಂತಹ ಕ್ರಮಗಳಿಗೆ ಅವಕಾಶ ನೀಡದ ರೀತಿಯಲ್ಲಿ ಕೇವಲ 12 ಬಾಕ್ಸ್ ಧ್ವನಿವರ್ಧಕಗಳನ್ನು ಎಲ್ಲಾ ಮಂಟಪಗಳು ಅಳವಡಿಸಿಕೊಳ್ಳಬೇಕು. ಮಂಟಪಗಳಲ್ಲಿ ಲೇಸರ್ ಲೈಟ್, ಸಿಡಿಮದ್ದು ಪ್ರದರ್ಶನ ನಿಷೇಧಿಸಿದ್ದು ಇದಕ್ಕೆ ದಶ ಮಂಟಪಗಳು ಬದ್ದರಾಗಬೇಕು. ಈ ಕುರಿತು ದಶ ಮಂಟಪಗಳು ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು. ಇದಕ್ಕೆ ಎಲ್ಲ ಮಂಟಪ ಸಮಿತಿಗಳು ಸಮ್ಮತಿ ವ್ಯಕ್ತಪಡಿಸಿದರು. ದಸರಾ ಉತ್ಸವದಲ್ಲಿ ಪುರಾತನ ಕಾಲದ ಸಂಪ್ರದಾಯಗಳು ಮುಂದುವರೆಯಬೇಕು. ದಸರಾ ಸಂಪ್ರದಾಯಗಳಿಗೆ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ದಶ ಮಂಟಪಗಳ ಶೋಭಾಯಾತ್ರೆ ನಡೆಸಬೇಕು ಎಂದು ಜಗದೀಶ್ ಹೇಳಿದರು.

ಅನುದಾನ ಆತಂಕ ಬೇಡ: ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿಯೂ ರಾಜ್ಯ ಸರ್ಕಾರದಿಂದ ಮಡಿಕೇರಿ ದಸರಾಕ್ಕೆ ಅನುದಾನ ಲಭ್ಯವಾಗಲಿದೆ. ಸೋಮವಾರ ಅಧಿಕೃತ ಅನುದಾನದ ಮಾಹಿತಿ ದೊರೆಯಲಿದೆ. ಈ ಅನುದಾನದಲ್ಲಿ 4 ಶಕ್ತಿ ದೇವತೆಗಳ ಕರಗಗಳು, ಹಾಗೂ ದಶ ಮಂಟಪಗಳಿಗೂ ಅನುದಾನ ಸಿಗಲಿದೆ. ಈ ಕುರಿತು ದಶ ಮಂಟಪಗಳು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ರಸ್ತೆ ದುರಸ್ತಿಯಾಗಲಿ: ದಶ ಮಂಟಪಗಳು, ಶೋಭಾಯಾತ್ರೆ ನಡೆಸುವ ರಸ್ತೆಗಳು ಗುಂಡಿ ಬಿದ್ದಿವೆ. ಕೆಲವು ಕಡೆ ಮಂಟಪಗಳು ಸಾಗದ ರೀತಿಯಲ್ಲಿ ರಸ್ತೆಗಳು ಹಾಳಾಗಿವೆ. ಈ ಹಿನ್ನಲೆಯಲ್ಲಿ ನಗರ ಸಭೆ ಮೂಲಕ ಶೀಘ್ರವೇ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ವಿವಿಧ ಮಂಟಪ ಸಮಿತಿಗಳು ಒತ್ತಾಯಿಸಿದವು. ಈಗಾಗಲೇ ನಗರ ಸಭೆಯಿಂದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ದಸರಾ ಉತ್ಸವಕ್ಕೂ ಮುನ್ನವೇ ರಸ್ತೆಗಳ ರಿಪೇರಿ ಮಾಡಲಾಗುತ್ತದೆ ಎಂದು ದಶ ಮಂಟಪ ಸಮಿತಿ ಪದಾಧಿಕಾರಿಗಳು ಸಭೆಗೆ ವಿವರಿಸಿದರು.

ಮಂಟಪಗಳು ಹೊರಡುವ ಸಮಯ, ಪ್ರದರ್ಶನ ನೀಡುವ ಸ್ಥಳ, ಶೋಭಾಯಾತ್ರೆ ತೆರಳುವ ಮಾರ್ಗ, ಮಂಟಪಗಳಲ್ಲಿ

ಟ್ರ್ಯಾಕ್ಟರ್ ಗಳ ಬಳಕೆ ಮತ್ತಿತ್ತರ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.

ವೇದಿಕೆಯಲ್ಲಿ ದಶ ಮಂಟಪ ಸಮಿತಿ ಪ್ರಮುಖರಾದ ಯೋಗೇಶ್, ಬಿ.ಪಿ. ಡಿಶು, ಸದಾ ಮುದ್ದಪ್ಪ, ಬಿ.ಕೆ ಜಗದೀಶ್, ಮಂಜುನಾಥ್, ರಾಜೇಶ್, ರಂಜಿತ್, ಪ್ರಭು ರೈ, ಸೋಮಯ್ಯ ಮತ್ತಿತರರಿದ್ದರು.

Share this article