ಹಿಂದೂ ಧರ್ಮದ‌ ಮೇಲೆ ನಿರಂತರ ಆಘಾತ: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork | Published : Mar 17, 2025 12:32 AM

ಸಾರಾಂಶ

ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪರಿಶುದ್ಧ ಗಂಗೆ ಸ್ವರೂಪದಂತಿರುವ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದ್ದು, ಅಮೆರಿಕ ಪ್ರಾಯೋಜಿತ ಮತಾಂತರ ಹಾಗೂ ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ‌ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ ಎಂದು ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಅವರು ಮಾತನಾಡಿದರು.

ಹೋಳಿ ಇರಲಿ, ದೀಪಾವಳಿ ಇರಲಿ ಹಿಂದೂಗಳಲ್ಲಿ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹಿಂದೂಗಳ ಆಚರಣೆ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮುಖಾಂತರ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳ ಮೇಲೆ ಆರೋಪಗಳನ್ನು ಮಾಡಲಾಗುತ್ತದೆ. ಹಿಂದೂ ಸಮಾಜ ಜಾಗೃತವಾದರೆ ಇತರ ಪಂಥೀಯರು ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಸಂತರ ಮೇಲೆ ಆರೋಪಗಳನ್ನು ಹಾಕಲಾಗುತ್ತದೆ, ಆಕ್ರಮಣಗಳನ್ನು ಮಾಡಲಾಗುತ್ತದೆ. ಎಡಪಂಥೀಯರು ಕ್ರಿಟಿಕಲ್ ರೇಸ್ ಥಿಯರಿ ಮುಖಾಂತರ ಹಿಂದೂಗಳನ್ನು ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಪರಿಹಾರವೆಂದರೆ ನಮ್ಮ ಧರ್ಮ ರಕ್ಷಣೆ ನಮ್ಮದೇ ಕರ್ತವ್ಯವಾಗಿದೆ ಎಂಬ ಅರಿವು ನಮ್ಮಲ್ಲಿ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.ಶಂಖನಾದ ಮತ್ತು ವೇದಮಂತ್ರ ಪಠಣದೊಂದಿಗೆ ಅಧಿವೇಶನದ ಉದ್ಘಾಟನೆಯನ್ನು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನೆರವೇರಿಸಿ, ಆಶೀರ್ವಚನ ನೀಡಿದರು.

ರಾಜ್ಯ ಉಚ್ಚನ್ಯಾಯಾಲಯದ ವಕೀಲರಾದ ಕೃಷ್ಣಮೂರ್ತಿ ಮಾತನಾಡಿ, ನ್ಯಾಯವಾದಿಗಳು ತಮ್ಮ ಕರ್ತವ್ಯವೆಂದು ರಾಷ್ಟ್ರ ಮತ್ತು ಧರ್ಮದ ವಿಚಾರಗಳಲ್ಲಿ ದಿಟ್ಟ ಹೆಜ್ಜೆಗಳನ್ನಿಡಬೇಕು ಎಂದವರು ಹೇಳಿದರು‌. ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ, ಉದ್ಯಮಿಗಳಾದ ಎಂ.ಜೆ. ಶೆಟ್ಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ್ ಗೌಡ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಮತ್ತಿತರರಿದ್ದರು.

Share this article