ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್

KannadaprabhaNewsNetwork |  
Published : Sep 28, 2026, 01:15 AM IST
೨೭ಕೆಎಂಎನ್‌ಡಿ-೨ಮಂಡ್ಯದ ನ್ಯಾಯಾಲಯದ ಆವರಣದಲ್ಲಿ ಕೌಟುಂಬಿಕ ನ್ಯಾಯಾಲಯ ಹಾಗೂ ವಕೀಲರ ಸಂಘದ ನವೀಕೃತ ಕಲ್ಲು ಕಟ್ಟಡವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಿದೆ. ನ್ಯಾಯಾಲಯದ ಕಟ್ಟಡದ ನವೀಕರಣಕ್ಕೆ ೫೦ ಲಕ್ಷ ರು. ಹಾಗೂ ವಕೀಲರ ವಾಹನ ನಿಲುಗಡೆ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ೭೫ ಲಕ್ಷ ರು.ಅನುದಾನ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಿರ್ಮಾಣವಾಗಲಿರುವ ಸಂವಿಧಾನ ಭವನವು ದೇಶಕ್ಕೆ ಮಾದರಿಯಾಗಬೇಕು. ಮಂಡ್ಯ ಎಂದರೆ ‘ಇಂಡಿಯಾ’ ಎಂಬಂತೆ ಇಲ್ಲಿಂದ ದೇಶದಾದ್ಯಂತ ಸಂವಿಧಾನದ ಆಶಯಗಳನ್ನು ತಲುಪಿಸುವ ವೇದಿಕೆಯಾಗಬೇಕು ಎಂದು ಶಾಸಕ ಪಿ.ರವಿಕುಮಾರ್ ಆಶಯ ವ್ಯಕ್ತಪಡಿಸಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದಿಂದ ನಡೆದ ಕೌಟುಂಬಿಕ ನ್ಯಾಯಾಲಯ ಹಾಗೂ ವಕೀಲರ ಸಂಘದ ನವೀಕೃತ ಕಲ್ಲು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಿದೆ. ನ್ಯಾಯಾಲಯದ ಕಟ್ಟಡದ ನವೀಕರಣಕ್ಕೆ ೫೦ ಲಕ್ಷ ರು. ಹಾಗೂ ವಕೀಲರ ವಾಹನ ನಿಲುಗಡೆ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ೭೫ ಲಕ್ಷ ರು.ಅನುದಾನ ಬಿಡುಗಡೆ ಮಾಡಿದೆ. ಶಾಸಕರ ನಿಧಿಯಿಂದಲೂ ೧೫ ಲಕ್ಷ ರು. ಅನುದಾನ ನೀಡಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಸಂವಿಧಾನ ಭವನ ನಿರ್ಮಾಣಕ್ಕೆ ಸುಮಾರು ೫ ಕೋಟಿ ರು. ಅಗತ್ಯವಿದೆ. ಈಗಾಗಲೇ ೩ ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಒಂದು ತಿಂಗಳೊಳಗೆ ಕಾಮಗಾರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದರು.

ಸಂವಿಧಾನ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುವುದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಆಶಯವಿದೆ. ದೇಶದ ನ್ಯಾಯಾಂಗ ಕ್ಷೇತ್ರದ ಗಣ್ಯರು ಭಾಗವಹಿಸುವ ಮೂಲಕ ಮಂಡ್ಯದ ಸಂವಿಧಾನ ಭವನ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂದರು.

ಮಹಿಳಾ ವಕೀಲರಿಗೆ ಅಗತ್ಯವಿರುವ ಹವಾ ನಿಯಂತ್ರಿತ ವಿಶ್ರಾಂತಿ ಕೊಠಡಿ ಸೇರಿದಂತೆ ಮತ್ತಷ್ಟು ಸೌಲಭ್ಯ ಕಲ್ಪಿಸುವ ಹೊಸ ಪ್ರಸ್ತಾವನೆಯನ್ನೂ ಮುಂದಿಡಲಾಗಿದೆ. ಇದಕ್ಕಾಗಿ ಅಗತ್ಯ ೧ಕೋಟಿ ರು. ಅನುದಾನ ಬಿಡುಗಡೆ ಮಾಡುತ್ತೇನೆ ಎಂದರು.

ಕೌಟುಂಬಿಕ ನ್ಯಾಯಾಲಯದಿಂದ ಶೀಘ್ರ ನ್ಯಾಯದಾನ:

ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಮಾತನಾಡಿ, ೨೦೧೯ರಲ್ಲಿ ಮಂಡ್ಯ ನಗರಕ್ಕೆ ಕೌಟುಂಬಿಕ ನ್ಯಾಯಾಲಯ ಮಂಜೂರಾಗಿದ್ದರೂ, ಸ್ಥಳದ ಕೊರತೆಯಿಂದಾಗಿ ಕಾರ್ಯಾರಂಭ ಮಾಡಲು ಸಾಧ್ಯವಾಗಿರಲಿಲ್ಲ.ಈ ಸಮಸ್ಯೆಯನ್ನು ಜಿಲ್ಲಾ ನ್ಯಾಯಾಧೀಶರ ಮೂಲಕ ತ್ವರಿತವಾಗಿ ಆಡಳಿತ ನ್ಯಾಯಮೂರ್ತಿ ಸುನಿಲ್‌ದತ್ ದೇವ್ ಅವರ ಗಮನಕ್ಕೆ ತರಲಾಯಿತು ಎಂದರು.

ಜುಲೈ ವೇಳೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ೫೯೮ ಪ್ರಕರಣಗಳು ಬಾಕಿ ಇದ್ದವು. ಈ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು ಅಗತ್ಯವಾಗಿದ್ದು, ನ್ಯಾಯದಾನ ವ್ಯವಸ್ಥೆಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ವಿಶೇಷ ಮಹತ್ವವಿದೆ ಎಂಬುದನ್ನು ರಾಜ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತರಲಾ ಯಿತು. ಇದರ ಫಲವಾಗಿ ಇದೀಗ ಮಂಡ್ಯ ನಗರದಲ್ಲಿ ಕೌಟುಂಬಿಕ ನ್ಯಾಯಾಲಯ ಕಾರ್ಯಾರಂಭಿಸುತ್ತಿದೆ ಎಂದರು.

ಕೌಟುಂಬಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ನ್ಯಾಯಾಧೀಶರೊಂದಿಗೆ ವಕೀಲರೂ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ವಕೀಲರು ಸಂಪೂರ್ಣವಾಗಿ ಸಹಕರಿಸುವ ವಿಶ್ವಾಸವಿದೆ ಎಂದು ಆಡಳಿತ ನ್ಯಾಯಮೂರ್ತಿಗಳಿಗೆ ಭರವಸೆ ನೀಡಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿ.ಚಂದ್ರಶೇಖರ್, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪುರುಷೋತ್ತಮ್ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ಸತೀಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ಕನ್ನಡ ಭವನ ಕಾಮಗಾರಿಗೆ ಆರಂಭದಲ್ಲೇ ವಿಘ್ನ..!