ಧಾರವಾಡ:
ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸರ್ಕಾರ ಬಿಲ್ ನೀಡದ ಹಿನ್ನಲೆ ಗುತ್ತಿಗೆದಾರರು, ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಆರೋಪಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ಪಿ.ಎಸ್. ಗೌಡರ ನಿರ್ವಹಿಸಿದ ಕಾಮಗಾರಿಯ ಸುಮಾರು ₹ 80 ಲಕ್ಷ ಬಿಲ್ ಪಾವತಿಸದ ಕೆಆರ್‌ಐಡಿಎಲ್ ಮತ್ತು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಶರಣಾಗಿರುವುದೇ ತಾಜಾ ಉದಾಹರಣೆ. ಗೌಡರ ನಿರ್ವಹಿಸಿದ ಕಾಮಗಾರಿ ಹಣ ಅವರ ಕುಟುಂಬಕ್ಕೆ ನೀಡುವ ಜತೆಗೆ ಗುತ್ತಿಗೆದಾರರ ಕ್ಷೇಮನಿಧಿ ದೊರೆಯುವ ಕಮಿಟಿ ಹಣ ಮತ್ತು ಸರ್ಕಾರ ಸಹ ಗೌಡರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಲೋಕೋಪಯೋಗಿ ಇಲಾಖೆ ₹ 4 ಸಾವಿರ ಕೋಟಿ, ಬೃಹತ್ ನೀರಾವರಿ ಇಲಾಖೆ ₹ 8 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆ ₹ 2 ಸಾವಿರ ಕೋಟಿ ಇತರೆ ಇಲಾಖೆ ₹ 500 ಕೋಟಿ ಹೀಗೆ ₹19,000 ಕೋಟಿ ಬಾಕಿ ಇದೆ. ಉತ್ತರದ ಜಿಲ್ಲೆಗಳಲ್ಲಿ ಇಷ್ಟೊಂದು ಹಣ ಬಾಕಿ ಉಳಿಸಿದರೆ ಹೇಗೆ? ಗುತ್ತಿಗೆದಾರರ ಕುಟುಂಬ ಬದುಕುವುದು ಹೇಗೆ? ಸಾಲ ನೀಡಿದ ಬ್ಯಾಂಕಿನ ಅಧಿಕಾರಿಗಳು ಗುತ್ತಿಗೆದಾರರ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಅವರು, ಜಲ್ಲಿಕಲ್ಲಿಗೆ ಸರ್ಕಾರ ಎಂಡಿಪಿ ನೀಡಲ್ಲ. ಎಂಡಿಪಿ ವಿನಾಯತಿ ನೀಡಬೇಕು. ಇಲ್ಲವೇ ಜಲ್ಲಿಕಲ್ಲು, ಮರಳು ಹಾಗೂ ಮೋರಂ ಸರ್ಕಾರವೇ ಪೂರೈಸಲಿ. ಜಿಎಸ್ಟಿ ಗುತ್ತಿಗೆದಾರರ ಬಿಲ್‌ಗಳಲ್ಲಿ ಕಡಿತಗೊಳಿಸಬೇಕು ಎಂದು ಒತ್ತಾಯ ಮಾಡಿದರು.ಈ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಜೂ. 30ರ ವರೆಗೂ ಗಡುವು ನೀಡಿದೆ. ಗುತ್ತಿಗೆದಾರರ ಸಮಸ್ಯೆಗಳು ಪರಿಹರಿಸದಿದ್ದರೆ, ಸರ್ಕಾರದ ಕಾಮಗಾರಿ ಸ್ಥಗಿತಗೊಳಿಸಿ, ಸರ್ಕಾರದ ವಿರುದ್ಧ ಮುಷ್ಕರ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಅಲ್ಲದೇ, ಸರ್ಕಾರಿ ಕಾಮಗಾರಿ ನಿರ್ವಹಿಸುವ ಉತ್ತರ-ದಕ್ಷಿಣ ಕರ್ನಾಟಕದ ಗುತ್ತಿಗೆದಾರರ ನಡುವೆ ಸರ್ಕಾರವು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿವಿಲ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ, ಬಿ.ಬಿ. ಹಿರೇಮಠ, ಎ.ಎಸ್. ಬೆಟಗೇರಿ ಇದ್ದರು.